ಕಾರ್ಕಳ: ಮಾರ್ಚ್ 19 : ಕಬ್ಬಡಿ ಪಂದ್ಯಾಟದ ವೇಳೆ ಹೃದಯಾಘಾತಕ್ಕೀಡಾಗಿದ್ದ ಅಜಾತ ಶತ್ರು ರಾಷ್ಟ್ರಮಟ್ಟದ ಕಬ್ಬಡಿ ಕ್ರೀಡಾಪಟು ಮುಟ್ಟುಪಾಡಿಯ ದಿ. ಪ್ರೀತಮ್ ಶೆಟ್ಟಿಯವರ ಆತ್ಮಸದ್ಗತಿಗಾಗಿ ಮುನಿಯಾಲಿನಲ್ಲಿ ಮೇ 3ರಂದು ಕಬ್ಬಡಿ ಪಂದ್ಯಾಟ ಆಯೋಜಿಸಲಾಗಿದೆ.
ರಾಜಕೀಯ ರಹಿತವಾಗಿ ಎಲ್ಲರನ್ನು ಜೊತೆಯಾಗಿಸಿಕೊಂಡು ನಡೆಯುವ ಈ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳು, ಕ್ರಿಕೆಟ್ ತಾರೆಯರು, ಬಾಲಿವುಡ್ ನಟ-ನಟಿಯರು ಭಾಗಿಯಾಗಲಿದ್ದಾರೆ ಎಂದು ಶ್ರೀ ಅರ್ಧನಾರೀಶ್ವರ ಸ್ಪೋರ್ಟ್ಸ್ ಕ್ಲಬ್ (ರಿ.) ಮುಟ್ಟುಪಾಡಿ ಇದರ ಗೌರವಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರು ಹೇಳಿದರು.
ಅವರು ಶ್ರೀ ಅರ್ಧನಾರೀಶ್ವರ ಸ್ಪೋರ್ಟ್ಸ್ ಕ್ಲಬ್ (ರಿ.) ಮುಟ್ಟುಪಾಡಿ ಇದರ ವತಿಯಿಂದ ಮೇ 3ರಂದು ಮುನಿಯಾಲಿನ ವೀರ ಸಾರ್ವಕರ್ ಮೈದಾನದಲ್ಲಿ ನಡೆಯುವ ಕಾರ್ಕಳ ವಿಧಾನ ಸಭಾ ವ್ಯಾಪ್ತಿಯ ಮತ್ತು ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾಟದ ಕುರಿತಾಗಿ ಮಾ. 18ರಂದು ಹೊಟೇಲ್ ಪ್ರಕಾಶ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಬೆಳಗ್ಗೆ 9.30ರಿಂದ ಕಾರ್ಕಳ ವಿಧಾನ ಸಭಾ ವ್ಯಾಪ್ತಿಯ ಆಯ್ದ 16 ತಂಡಗಳ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಇದರ ವಿಜೇತರಿಗೆ ಪ್ರಥಮ 25 ಸಾ. ರೂ., ದ್ವಿತೀಯ – 15 ಸಾ. ರೂ., ತೃತೀಯ – 10 ಸಾ.ರೂ. ಹಾಗೂ ಚತುರ್ಥ 10 ಸಾ. ರೂ. ಬಹುಮಾನ ನೀಡಲಾಗುತ್ತದೆ. ಸಂಜೆ 6.30ರಿಂದ ನಡೆಯುವ 8 ತಂಡಗಳ ಪ್ರೋ ಕಬ್ಬಡಿ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳು ಆಡಲಿದ್ದಾರೆ. ಬಿಡ್ಡಿಂಗ್ ಮೂಲಕ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ರಾಷ್ಟ್ರಮಟ್ಟದ 8 ಫ್ರಾಂಚೈಸಿಗಳಿಗೆ ತಂಡಗಳ ಖರೀದಿಗೆ ಅವಕಾಶವಿದೆ. ಇದರಲ್ಲಿ ಎರಡು ತಂಡಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಮೀಸಲಿರಿಸಲಾಗಿದೆ. ವಿಜೇತರಿಗೆ ಪ್ರಥಮ – 1 ಲ. ರೂ., ದ್ವಿತೀಯ – 75 ಸಾ.ರೂ., ತೃತೀಯ ಮತ್ತು ಚತುರ್ಥ -50 ಸಾ.ರೂ. ಹಾಗೂ ಉಳಿದ ನಾಲ್ಕು ತಂಡಗಳಿಗೆ ತಲಾ 25 ಸಾ.ರೂ. ಸಮಾಧನಕರ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಕಬ್ಬಡಿ ಕ್ರೀಡಾಪಟು ಜಗದೀಶ್ ಕುಂಬ್ಳೆ ಮಾತನಾಡಿ, ಮುನಿಯಾಲಿನಲ್ಲಿ ನಡೆಯುವ ಕಬ್ಬಡಿ ಪಂದ್ಯಾಟದಲ್ಲಿ ಹಿಂದೂಸ್ಥಾನದ ಉತ್ತಮ ಆಟಗಾರರು ಭಾಗಿಯಾಗಲಿದ್ದು, ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅವಶ್ಯ ಎಂದರು. ಈ ಸಂದರ್ಭ ಶ್ರೀ ಅರ್ಧನಾರೀಶ್ವರ ಸ್ಪೋರ್ಟ್ಸ್ ಕ್ಲಬ್ (ರಿ.) ಮುಟ್ಟುಪಾಡಿ ಇದರ ಅಧ್ಯಕ್ಷ ಸುನಿಲ್ ಹೆಗ್ಡೆ ಕೋಶಾಧಿಕಾರಿ ಸುದೀಪ್ ಅಜಿಲ, ಸುಹಾಶ್ ಶೆಟ್ಟಿ ಮುಟ್ಟುಪಾಡಿ, ಹರೀಶ್ ಶೆಟ್ಟಿ ಪಡುಕುಡೂರು, ಗೋಪಿನಾಥ್ ಭಟ್ ಉಪಸ್ಥಿತರಿದ್ದರು.