ಮಂಗಳೂರು :ಮಾರ್ಚ್ 16: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ -2 ಪೊಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು 20 ವರ್ಷಗಳ ಕಠಿಣ ಸಜೆ ವಿಧಿಸಿ ಶನಿವಾರ ತೀರ್ಪು ನೀಡಿದ್ದಾರೆ
ಮುಲ್ಕಿ ತಾಲೂಕು ಏಳಿಂಜೆ ನಿವಾಸಿ ರವಿ (35) ಶಿಕ್ಷೆಗೊಳಗಾದ ಆರೋಪಿ. ಈತ 2023ರ ಜೂನ್ ತಿಂಗಳಿನಿಂದ ಡಿಸೆಂಬರ್‌ವರೆಗೆ ಕಾರ್ಕಳ ತಾಲೂಕು ಇನ್ನಾ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈ ವೇಳೆ ಆತನ ಗೆಳೆಯನ ಪುತ್ರಿ ಮೂಲತಃ ಚಿಕ್ಕಮಗಳೂರಿನ, 17 ವರ್ಷ ವಯಸ್ಸಿನ ಬಾಲಕಿ ಪಿಯುಸಿ ವಿದ್ಯಾಭ್ಯಾಸಕ್ಕೆಂದು ಬಂದು ಆತನ ಮನೆಯಲ್ಲಿ ಉಳಿದುಕೊಂಡಿದ್ದಳು. ಆರೋಪಿ ರವಿ ಆಕೆಯನ್ನು 2023ರ ನವೆಂಬರ್‌ನಲ್ಲಿ ಕಾರ್ಕಳ ತಾಲೂಕು ಇನ್ನಾದ ರಸ್ತೆ ಬದಿಯ ಗುಡ್ಡ ಜಾಗಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಅನಂತರ ಆತ 2023ರ ಡಿಸೆಂಬರ್‌ನಿಂದ ಏಳಿಂಜೆಯಲ್ಲಿ ವಾಸವಾಗಿದ್ದ. ಆಗ ಮನೆಯಲ್ಲಿ ಹಲವು ಬಾರಿ ಅತ್ಯಾಚಾರವೆಸಗಿದ್ದ. 2024ರ ಎ.11ರಂದು ಸಂಜೆ ಏಳಿಂಜೆಯ ಹಾಡಿ ಜಾಗಕ್ಕೆ ಕರೆದೊಯ್ದು ಅಲ್ಲಿಯೂ ಅತ್ಯಾಚಾರವೆಸಗಿದ್ದ ಎನ್ನಲಾಗಿದ್ದು, ಪರಿಣಾಮವಾಗಿ ಬಾಲಕಿ ಗರ್ಭ ಧರಿಸಿದ್ದಳು. ಆರೋಪಿ ವಿರುದ್ಧ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಧೀಶರು ಆರೋಪಿಗೆ ಪೊಕ್ಸೋ ಕಾಯಿದೆಯ ಕಲಂ 6 ಮತ್ತು ಐಪಿಸಿ 376(3) ಹಾಗೂ 376(2)(ಎಫ್)(ಎನ್) ಅಡಿಯಲ್ಲಿ 20 ವರ್ಷ ಕಠಿಣ ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ 4 ತಿಂಗಳ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಮೊತ್ತವನ್ನು ಬಾಲಕಿಗೆ ನೀಡುವಂತೆ ಹಾಗೂ ಕಾನೂನು ಸೇವಾ ಪ್ರಾಧಿಕಾರದಿಂದ 6.50 ಲ.ರೂ. ಪರಿಹಾರವನ್ನು ಬಾಲಕಿಗೆ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಮುಲ್ಕಿ ಇನ್ಸ್‌ಪೆಕ್ಟರ್ ಆಗಿದ್ದ ವಿದ್ಯಾಧರ್ ಡಿ. ಬಾಯ್ಕೇರಿಕರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಶೇಷ ಸರಕಾರಿ ಅಭಿಯೋಜಕ ಬದ್ರಿನಾಥ ನಾಯರಿ ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ಬೋಳೂರು ಅವರು ಸಾಕ್ಷಿಗಳನ್ನು ವಿಚಾರಿಸಿ ಸರಕಾರದ ಪರವಾಗಿ ವಾದಿಸಿದ್ದರು.