ಉಡುಪಿ:ಮಾರ್ಚ್ 15 :ಉಡುಪಿ ನಗರಸಭೆಯ 2025-26ನೆ ಸಾಲಿನ 5.17ಕೋಟಿ ರೂ. ಮಿಗತೆಯ ಬಜೆಟ್‌ನ್ನು ಮಂಡಿಸಲಾಗಿದ್ದು, ಒಟ್ಟು 250.63 ಕೋಟಿ ರೂ. ಆದಾಯ ಹಾಗೂ 245.46ಕೋಟಿ ರೂ. ಒಟ್ಟು ವೆಚ್ಚಗಳನ್ನು ತೋರಿಸಲಾಗಿದೆ.
ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಶನಿವಾರ ಬಜೆಟ್ ಮಂಡನೆ ಮಾಡಿದರು. ಮಂಡಿಸಿದರು. ಉಡುಪಿ ನಗರದ ವಿಶ್ವೇಶ್ವರಯ್ಯ ಮಾರುಕಟ್ಟೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. 33 ಟನ್ ಸಾಮರ್ಥ್ಯದ ಎಂ.ಆರ್‌ಎಫ್ ಘಟಕ ನಿರ್ಮಾಣಕ್ಕೆ 4.45ಕೋಟಿ ರೂ. ಅಂದಾಜು ಮೊತ್ತಕ್ಕೆ ಡಿಪಿಆರ್ ತಯಾರಿಸಲಾಗಿದೆ.
ಉಡುಪಿ ನಗರದ ವಾಹನ ಮತ್ತು ಜನ ಸಂಚಾರಕ್ಕೆ ಅನುಕೂಲ ಕಲ್ಪಿಸುವ ದೃಷ್ಠಿಯಿಂದ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ವೃತ್ತಗಳು ಮತ್ತು ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಲಾಗುವುದು. ಹಿರಿಯ ನಾಗರಿಕರಿಗೆ ಅನು ಕೂಲವಾಗುವಂತೆ ಸಾಧ್ಯ ಇರುವಲ್ಲಿ ರಸ್ತೆಗಳಿಗೆ ಪುಟ್‌ಪಾತ್ ರಚಿಸಿ ರೇಲಿಂಗ್ ಅಳವಡಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಮಣಿಪಾಲ ಜ್ಯೂನಿಯರ್ ಕಾಲೇಜು ಬಳಿ, ಅಜ್ಜರಕಾಡು ಕಸ್ತೂರ್ಬಾ ನಗರ ರಸ್ತೆ ಮತ್ತು ಮಲ್ಪೆ ಬೀಚ್ ಬಳಿ ವೆಂಡರ್ ರೆನ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ನಗರದ ಪಾರ್ಕಿಂಗ್ ಸಮಸ್ಯೆ ಬಗ್ಗೆ ಮತ್ತು ಸಿಟಿ ಬಸ್ ನಿಲ್ದಾಣದ ಉನ್ನತಿಕರಣಗೊಳಿಸಲು ಕ್ರಮ ವಹಿಸಲಾಗುವುದು. ದಿನದ ಸಂತೆ ಮಾರುಕಟ್ಟೆಯನ್ನು ಸಿಟಿ ಬಸ್ ನಿಲ್ದಾಣದ ಮೇಲ್ಛಾವಣಿ ಮೇಲೆ ಸುಸಜ್ಜಿತವಾಗಿ ನಿರ್ಮಿಸಲಾಗುವುದು ಎಂದರು.
ನಗರದ ಪ್ರಮುಖ ಸ್ಥಳಗಳಲ್ಲಿ ಸೋಲಾರ್ ಲೈಟ್ ಮತ್ತು ಜಂಕ್ಷನ್‌ಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸಲಾಗುವುದು. ಉಡುಪಿ ನಗರಸಭೆ ಸಮೀಪದ ಗ್ರಾಪಂಗಳನ್ನು ಸೇರಿ ಮಹಾನಗರ ಪಾಲಿಕೆ ಘೋಷಣೆಯಾಗುವ ಹಂತದಲ್ಲಿದೆ. ಉಡುಪಿ ನಗರಸಭೆಯನ್ನು ನಾಗರಿಕ ಸ್ನೇಹಿ ಮಾಡುವ ಬಗ್ಗೆ ಒತ್ತು ನೀಡಲಾಗುವುದು, ವಾರಾಹಿ ಕುಡಿಯುವ ನೀರು ಸರಬರಾಜು ಯೋಜನೆ ಈಗಾಗಲೇ ಅಂತಿಮ ಹಂತದಲ್ಲಿದ್ದು, ನಾಗರಿಕರಿಗೆ ದಿನದ 24ಗಂಟೆ ಕುಡಿಯುವ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಬಜೆಟ್‌ನಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್ ಕಲ್ಮಾಡಿ, ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ ಹಾಜರಿದ್ದರು