ಹಿರಿಯಡ್ಕ:ಮಾರ್ಚ್ 13 :ಗರುಡ ಗ್ಯಾಂಗನ ಸದಸ್ಯ ಇಸಾಕ್ ನನ್ನು ಹಾಸನದಲ್ಲಿ ಬಂಧಿಸಿ ಮಣಿಪಾಲಕ್ಕೆ ಕರೆತರುತ್ತಿದ್ದ ವೇಳೆ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಈತನ ಕಾಲಿಗೆ ಗುಂಡೇಟು ತಗಲಿದ್ದು, ಇಬ್ಬರು ಪೊಲೀಸರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ನೆಲಮಂಗಲದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲದಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದ ಇಸಾಕ್ ಹಾಗೂ ಇತರರ ಬಂಧನಕ್ಕಾಗಿ ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕ, ಮಲ್ಪೆ ವೃತ್ತ ನಿರೀಕ್ಷಕರು ಹಾಗೂ ಇತರ ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಆರೋಪಿತರ ಜಾಡನ್ನು ಹಿಡಿದು, ಮಾ.12ರಂದು ಮಧ್ಯಾಹ್ನ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಸಾಕ್ ಸೇರಿದಂತೆ ಒಟ್ಟು ನಾಲ್ಕು ಆರೋಪಿ ಗಳನ್ನು ಬಂಧಿಸಿತ್ತು. ಈ ಎಲ್ಲಾ ಆರೋಪಿಗಳನ್ನು ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಮಣಿಪಾಲಕ್ಕೆ ಕರೆತರುವಾಗ, ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಅಂಗಡಿ ಬಳಿ ಸಂಜೆ 7.15ರ ಸುಮಾರಿಗೆ ಆರೋಪಿ ಇಸಾಕ್ ತನಗೆ ತುರ್ತಾಗಿ ವಾಂತಿ ಹಾಗೂ ಮೂತ್ರ ವಿಸರ್ಜನೆ ಮಾಡಲೇಬೇಕೆಂದು ಹಠ ಮಾಡಿದನು.
ಅದರಂತೆ ಪೊಲೀಸರು ವಾಹನವನ್ನು ನಿಲ್ಲಿಸಿದ್ದು ಮೂತ್ರ ವಿಸರ್ಜನೆ ನಂತರ ಇಸಾಕ್ ಏಕಾಏಕಿ ಅಲ್ಲೆ ಇದ್ದ ಉಡುಪಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ತಳ್ಳಿ, ಆತನ ಕೈಗೆ ಅಳವಡಿಸಲಾಗಿದ್ದ ಲೀಡಿಂಗ್ ಚೈನ್ ಅನ್ನು ಬಳಸಿ ಬಲವಾಗಿ ದೂಡಿದನು.
ನಂತರದಲ್ಲಿ ಇಬ್ಬರು ಪೊಲೀಸ್ ಉಪನಿರೀಕ್ಷಕರುಗಳು ಹಿಡಿಯಲು ಪ್ರಯತ್ನಿಸಿದಾಗ ಅವರಿಗೆ ಇಸಾಕ್ ಬಲವಾಗಿ ಒದ್ದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು. ಹೀಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಆತನ ಲೀಡಿಂಗ್ ಚೈನ್ ಪೊಲೀಸ್ ವಾಹನದ ಎದುರಿನ ಗ್ಲಾಸಿಗೆ ಬಡಿಯಿತು. ಇದರಿಂದ, ಗ್ಲಾಸ್ ಒಡೆದು ಅಧಿಕಾರಿ ಹಾಗೂ ಸಿಬ್ಬಂದಿಗೆ ಗಾಯಗಳಾಗಿವೆ.
ನಂತರದಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ದೇವರಾಜ್ ಆತನಿಗೆ ಎಚ್ಚರಿಕೆ ನೀಡಿದ್ದು, ಕೇಳದೆ ಇದ್ದಾಗ ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಕೂಡ ಇಸಾಕ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಿದರು. ಇದರಿಂದ ಗಾಯಗೊಂಡ ಆರೋಪಿ ಇಸಾಕ್ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಅರುಣ್ ತಿಳಿಸಿದ್ದಾರೆ.