ಕಾರ್ಕಳ : ಮಾರ್ಚ್ 08:ದಾಖಲೆಯ 16ನೇ ಬಜೆಟ್ ಮಂಡಿಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಾ ವರ್ಗ ಎಲ್ಲಾ ಸಮುದಾಯಗಳನ್ನು ಒಳಗೊಂಡ ಸಮಪಾಲು ಸಮ ಬಾಳು ಬಜೆಟನ್ನು ರಾಜ್ಯದ ಜನರಿಗೆ ನೀಡಿದ್ದಾರೆ ಎಂದು ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಬಣ್ಣಿಸಿದ್ದಾರೆ.
ಸುಮಾರು 51 ಸಾವಿರ ಕೋಟಿ ಮೊತ್ತವನ್ನು ಪಂಚ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟಿದ್ದು ಇದು ಜನತೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ, ಆ ಮೂಲಕ ಗ್ಯಾರಂಟಿ ಯೋಜನೆಗಳ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ ಬಿಜೆಪಿಗರ ಟೀಕೆಗಳು ಠುಸ್ಸಾಗಿದೆ ಎಂದಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಗೌರವಧನ ಒಂದು ಸಾವಿರ ರೂಪಾಯಿ ಹಾಗೂ ಸಹಾಯಕಿಯರ ಮಾಸಿಕ ಗೌರವದನ 750 ರೂಪಾಯಿಗೆ ಹೆಚ್ಚಿಸುವ ಭರವಸೆಯನ್ನು ನೀಡಿದ್ದಾರೆ ಮತ್ತು ಬಿಸಿಯೂಟ ಸಿಬ್ಬಂದಿಗಳಿಗೂ ವೇತನ ಏರಿಕೆಯಾಗಲಿದೆ ಎಂದಿದ್ದಾರೆ. 100 ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ 50 ಪ್ರೌಢಶಾಲೆಗಳನ್ನು ಪ್ರಥಮ ದರ್ಜೆ ಕಾಲೇಜುಗಳನ್ನಾಗಿ ಉನ್ನತಿಗರಿಸುವ ಘೋಷಣೆಯನ್ನು ಮಾಡಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ಅರ್ಚಕರಿಗೆ ನೀಡುತ್ತಿರುವ ತಸ್ತಿಕ್ ಮೊತ್ತವನ್ನು 60 ಸಾವಿರದಿಂದ 72 ಸಾವಿರ ರೂಪಾಯಿಗೆ ಏರಿಸಲಾಗುವುದು ಮತ್ತು ಕರ್ನಾಟಕ ರಾಜ್ಯ ವಸತಿಕೋಶ ಸ್ಥಾಪನೆಗೆ ನಿರ್ಧರಿಸಲಾಗಿದೆ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ರೂ.8,000 ಕೋಟಿ ರೂಪಾಯಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮೀಸಲಿಡುವ ಮೂಲಕ ಇದು ಸರ್ವರನ್ನು ಒಳಗೊಂಡ ಬಜೆಟ್ ಆಗಿದೆ, ಜನರ ಜೀವನ ಮಟ್ಟವನ್ನು ಉದಾರಣೆ ಮಾಡುವಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯುತ್ತಮ ಬಜೆಟ್ ಅನ್ನು ಮಂಡಿಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜನತೆಯ ಪರವಾಗಿ ಅಭಿನಂದನೆಗಳು ಎಂದು ಉದಯ ಶೆಟ್ಟಿ ಮುನಿಯಾಲು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.