ಬೆಂಗಳೂರು, ಮಾರ್ಚ್ 01: ಕರ್ನಾಟಕದಲ್ಲಿ ತಯಾರಾಗುವ ಉತ್ಪನ್ನಗಳಿಗೆ ಕನ್ನಡ ಲೇಬಲ್, ಹೆಸರು ಡೈರೆಕ್ಷನ್ ಸೇರಿದಂತೆ ಎಲ್ಲವೂ ಕನ್ನಡದಲ್ಲಿ ಇರಬೇಕೆಂದು ರಾಜ್ಯ ಸರ್ಕಾರ ನಿನ್ನೆ (ಫೆಬ್ರವರಿ 28) ಅಧಿಕೃತ ಸುತ್ತೋಲೆ ಹೊರಡಿಸಿದೆ.
ರಾಜ್ಯದೊಳಗೆ ತಯಾರಿಸಿದ ಮತ್ತು ಮಾರಾಟವಾಗುವ ಎಲ್ಲಾ ಕೈಗಾರಿಕಾ ಮತ್ತು ಇತರೆ ಗ್ರಾಹಕ ಉತ್ಪನ್ನಗಳ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳು ಯಾವುದಾದರೂ ಇದ್ದಲ್ಲಿ ಯಾವುದೇ ಇತರ ಭಾಷೆಯ ಜೊತೆಗೆ ಕನ್ನಡದಲ್ಲಿ ಇರತಕ್ಕದ್ದು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಉಮಾದೇವಿ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022ರ ಅಡಿಯಲ್ಲಿ ಸುತ್ತೋಲೆ ಹೊರಡಿಸಿದ್ದು, ಒಂದು ಭಾಷೆ ಬೆಳವಣಿಗೆ ಆಗಬೇಕಿದ್ರೆ ಆ ನೆಲದಲ್ಲಿ ಉತ್ಪಾದನೆ, ಮಾರುಕಟ್ಟೆ ಮತ್ತು ವ್ಯವಹಾರ ಗಳು ಸ್ಥಳೀಯ ಭಾಷೆಯಲ್ಲಿ ಇರಬೇಕು. ಹೀಗಾಗಿ ರಾಜ್ಯದಲ್ಲಿ ತಯಾರಾಗುವ ಸರ್ಕಾರಿ ಮತ್ತು ಖಾಸಗಿ ಉತ್ಪನ್ನ ಗಳ ಮೇಲೆ ಕನ್ನಡ ಕಡ್ಡಾಯವಾಗಿರಬೇಕು ಉತ್ಪನ್ನದ ಹೆಸರು ಮತ್ತು ಅವುಗಳ ನಿರ್ದೇಶನವು ಕನ್ನಡ ಭಾಷೆಯಲ್ಲಿ ಇರಬೇಕು. ಸರ್ಕಾರಿ ಮತ್ತು ಖಾಸಗಿ ಉತ್ಪಾದಕರ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ ಮೇಲ್ವಿಚಾರಣೆ ನಡೆಸಬೇಕು ಎಂದು ತಿಳಿಸಲಾಗಿದೆ.
69ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, “ಖಾಸಗಿ ಅಥವಾ ಸರ್ಕಾರಿ ವಲಯದಿಂದ ಕರ್ನಾಟಕದಲ್ಲಿ ತಯಾರಾಗುವ ಉತ್ಪನ್ನಗಳು ಸಾಮಾನ್ಯವಾಗಿ ಇಂಗ್ಲಿಷ್‌ನಲ್ಲಿ ಮಾತ್ರ ಲೇಬಲ್‌ಗಳನ್ನು ಹೊಂದಿರುತ್ತವೆ. ಭವಿಷ್ಯದಲ್ಲಿ, ನಾವು ಕನ್ನಡವನ್ನೂ ಸೇರಿಸುವ ಗುರಿಯನ್ನು ಹೊಂದಿದ್ದೇವೆ” ಎಂದು ಹೇಳಿದ್ದರು. ಅದರಂತೆ ಇದೀಗ ಉತ್ಪನ್ನಗಳ ಇತರೆ ಭಾಷೆಯ ಜೊತೆ ಕನ್ನಡ ಕಡ್ಡಾಯವಾಗಿ ಇರಬೇಕೆಂದು ರಾಜ್ಯ ಸರ್ಕಾರ ಅಧಿಕೃತವಾಗಿ ಸುತ್ತೋಲೆ ಹೊರಡಿಸಿದೆ.