ಕಾರ್ಕಳ, ಫೆಬ್ರವರಿ .26: ಇತ್ತೀಚೆಗೆ ಶರಣಾದ ನಕ್ಸಲರ ಪೈಕಿ ನಾಲ್ವರನ್ನು ಕಾರ್ಕಳ ಉಪವಿಭಾಗ ವ್ಯಾಪ್ತಿಯ ವಿವಿಧ ಪ್ರಕರಣ ಗಳಿಗೆ ಸಂಬಂಧಿಸಿ ನಿನ್ನೆ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಇವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸಾದ ಎಂ.ವನಜಾಕ್ಷಿ ಯಾನೆ ಜ್ಯೋತಿ ಯಾನೆ ಕಲ್ಪನ(58), ಬೆಳ್ತಂಗಡಿಯ ಕುತ್ತೂರಿನ ಸುಂದರಿ ಯಾನೆ ಗೀತಾ ಯಾನೆ ಜಿನ್ನಿ(40), ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಬಾಳೆಗೆರೆಯ ಮುಂಡಗಾರು ಲತಾ ಯಾನೆ ಲೋಕಮ್ಮಯಾನೆ ಶ್ಯಾಮಲ(45), ರಾಯಚೂರು ಜಿಲ್ಲೆಯ ಮಾನವಿಯ ಜಾನ್ ಯಾನೆ ಜಯಣ್ಣ ಯಾನೆ ಮಹೇಶ್ ಯಾನೆ ಮಾರಪ್ಪ(49) ಪೊಲೀಸ್ ಕಸ್ಟಡಿಗೆ ಪಡೆದ ಆರೋಪಿಗಳು.
ಕಾರ್ಕಳ ಉಪ ವಿಭಾಗದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಂ.ವನಜಾಕ್ಷಿ ವಿರುದ್ಧ ಒಟ್ಟು 3 ಪ್ರಕರಣಗಳು, ಸುಂದರಿ ವಿರುದ್ಧ ಒಟ್ಟು 11 ಪ್ರಕರಣಗಳು, ಮುಂಡಗಾರು ಲತಾ ವಿರುದ್ಧ ಒಟ್ಟು 5 ಪ್ರಕರಣಗಳು, ಜಾನ್ ವಿರುದ್ಧ ಒಟ್ಟು 3 ಪ್ರಕರಣಗಳು ದಾಖಲಾಗಿ ನ್ಯಾಯಾಲಯದ ವಿಚಾರಣೆಯಲ್ಲಿದೆ.
ಆ ಹಿನ್ನೆಲೆಯಲ್ಲಿ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಇವರನ್ನು ಬಾಡಿ ವಾರೆಂಟ್ ಮೂಲಕ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಹರ್ಷ ಪ್ರಿಯಂದವ ನೇತೃತ್ವದಲ್ಲಿ ಪೊಲೀಸರು ಕಾರ್ಕಳ ಎ.ಸಿ.ಜೆ. ಜೆ.ಎಂ.ಎಫ್.ಸಿ. ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಅದರಂತೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಹಾಗೂ ತನಿಖೆಯನ್ನು ನಡೆಸುತ್ತಿದ್ದಾರೆ.