ಉಡುಪಿ : ಜನವರಿ 15- ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಮಕರ ಸಂಕ್ರಾಂತಿ ಉತ್ಸವವು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಅತ್ಯಂತ ವೈಭವದಿಂದ ನಡೆಯಿತು.
ಇದರ ಅಂಗವಾಗಿ ಮಧ್ವ ಸರೋವರದಲ್ಲಿ ತೆಪ್ಪೋತ್ಸವವನ್ನು ಮಾಡಲಾಯಿತು. ನಂತರ ರಥಬೀದಿಯಲ್ಲಿ ಬ್ರಹ್ಮರಥ, ಗರುಡ ರಥ, ಸಣ್ಣ ರಥಗಳಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರಮೌಳೇಶ್ವರ ದೇವರ ಉತ್ಸವ ಮೂರ್ತಿಗಳನ್ನು ಪೂಜಿಸಿ, ವೈಭವದಿಂದ ರಥೋತ್ಸವವನ್ನು ನಡೆಸಲಾಯಿತು.
ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.
ಆಸ್ಟ್ರೇಲಿಯದ ವಿಕ್ಟೋರಿಯಾ ರಾಜ್ಯದ ಸಂಸದ ಜಾನ್ ಮುಲಾಹಿ ಅತಿಥಿಯಾಗಿ ಪಾಲ್ಗೊಂಡಿದ್ದು ಉತ್ಸವದ ವಿಶೇಷತೆಯನ್ನು ಹೆಚ್ಚಿಸಿತು.
ಆಕರ್ಷಕ ವಿದ್ಯುತ್ ದೀಪಗಳು, ಕುಣಿತ ಭಜನೆ, ಮತ್ತು ಸುಡುಮದ್ದು ಪ್ರದರ್ಶನದಿನದ ಕೂಡಿದ ರಥಬೀದಿಯಲ್ಲಿ ವರುಣನ ಅಭಿಷೇಕದೊಂದಿಗೆ ಮೂರು ರಥಗಳ ಉತ್ಸವವು ಸಂಪನ್ನಗೊಂಡಿತು.
ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ಸುರಿದ ವರ್ಷಧಾರೆಯ ನಡುವೆಯೂ ವೈಭವದ ರಥೋತ್ಸವವನ್ನು ಕಣ್ತುಂಬಿಕೊಂಡು ಪಾವನರಾದರು.