ಉಡುಪಿ: ಜನವರಿ 10:ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶ್ರೀಕೃಷ್ಣಮಠದಲ್ಲಿ ನಿನ್ನೆ ಗುರುವಾರ ವಾರ್ಷಿಕ ಸಪ್ತೋತ್ಸವವು ಆರಂಭಗೊಂಡಿತು.
ಸಂಜೆಯ ಚಾಮರ ಸೇವೆ ಪೂಜೆಯ ಬಳಿಕ ಮೊದಲು ತೆಪ್ಪೋತ್ಸವ ನಡೆಯಿತು. ಈ ಬಾರಿ ತೆಪ್ಪವನ್ನು ಪಾರ್ಥಸಾರಥಿ ರೂಪದಲ್ಲಿ ಅಲಂಕರಿಸಲಾಗಿತ್ತು.
ತೆಪ್ಪೋತ್ಸವದ ಅನಂತರ ಎರಡು ರಥಗಳ ಉತ್ಸವ ರಥಬೀದಿಯಲ್ಲಿ ನಡೆಯಿತು. ಒಂದು ರಥದಲ್ಲಿ ಶ್ರೀಕೃಷ್ಣ – ಮುಖ್ಯಪ್ರಾಣ, ಇನ್ನೊಂದು ರಥದಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನಗಳ ಉತ್ಸವ ಮೂರ್ತಿಯನ್ನು ಇರಿಸಿ ಪೂಜಿಸಲಾಯಿತು. ಪುತ್ತಿಗೆ ಕಿರಿಯ ಸ್ವಾಮೀಜಿ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಪಾಲ್ಗೊಂಡರು.
ಇದಕ್ಕೂ ಮುನ್ನ ಕನಕ ಗೋಪುರದ ಎದುರು ಕುಣಿತದ ಭಜನೆಯನ್ನು ಪರ್ಯಾಯ ಶ್ರೀಗಳು ಉದ್ಘಾಟಿಸಿದರು. ಉತ್ಸವ ಮುಂದು ವರಿಯುತ್ತಿದ್ದಂತೆ ಭಜನ ತಂಡಗಳು ಆಕರ್ಷಕವಾಗಿ ಕುಣಿತದ ಭಜನೆಯನ್ನು ನಡೆಸಿಕೊಟ್ಟರು. ಇಡೀ ರಥಬೀದಿ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದೆ.
ಜ. 13ರ ವರೆಗೆ ನಿತ್ಯ ಸಪ್ತೋತ್ಸವ ನಡೆಯಲಿದ್ದು ಜ. 14ರಂದು ಮಕರಸಂಕ್ರಾಂತಿ ಉತ್ಸವದಲ್ಲಿ ಬ್ರಹ್ಮರಥ ಸಹಿತ ಮೂರು ತೇರುಗಳ ಉತ್ಸವ ನಡೆಯಲಿದೆ. ಮಕರಸಂಕ್ರಾಂತಿಯಂದೇ ಬ್ರಹ್ಮರಥದ ಉತ್ಸವ ಆರಂಭವಾಗುವುದು., ಜ. 15ರಂದು ಹಗಲು ಉತ್ಸವ ಚೂರ್ಣೋತ್ಸವ ಜರಗಲಿದೆ.