ಮಂಗಳೂರು: ಜನವರಿ 08:ಕಂಪನಿ ಮತ್ತು ಸಂಸ್ಥೆಗಳು ಏಕರೂಪದ ಹಾಗೂ ಪಾರದರ್ಶಕವಾದ ಲೆಕ್ಕಪತ್ರ ವ್ಯವಸ್ಥೆಯನ್ನು ಹೊಂದಿರಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ರಾಜು ಮೊಗವೀರ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಅಧ್ಯಯನ ವಿಭಾಗ ಮತ್ತು ಅಸೋಸಿಯೇಷನ್ ಆಪ್ ಸರ್ಟಿಫೈಡ್ ಚಾರ್ಟೆಡ್ ಅಕೌಂಟೆಂಟ್ಸ್ ಇವರ ಸಂಯುಕ್ತ ಆಶಯದಲ್ಲಿ ಶ್ರೀನಿವಾಸ ಮಲ್ಯ ಸಭಾಂಗಣದಲ್ಲಿ ನಡೆದ ಇಂಟರ್ನ್ಯಾಷನಲ್ ಫೈನಾನ್ಸಿಯಲ್ ರಿಪೋರ್ಟಿಂಗ್ ಸ್ಟ್ಯಾಂಡರ್ಡ್ (ಐ.ಎಫ್.ಆರ್.ಎಸ್) ಕಾರ್ಯಗಾರದಲ್ಲಿ ಮಾತನಾಡುತ್ತಾ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಲೆಕ್ಕಪತ್ರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು ಹಾಗೂ ಪ್ರಪಂಚ ಮತ್ತು ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಪದ್ಧತಿಯನ್ನು ಕಟ್ಟುನಿಟ್ಟಾಗಿ ತೊಲಗಿಸಲು ಹಣಕಾಸು ಮತ್ತು ಲೆಕ್ಕಪತ್ರ ಸಂಸ್ಥೆಗಳು ಮತ್ತು ಲೆಕ್ಕಾಧಿಕಾರಿಗಳು ನಿಷ್ಠೆಯಿಂದ ಶ್ರಮಿಸಬೇಕು ಇದರಿಂದ ದೇಶದ ಅಭಿವೃದ್ಧಿಗೆ ಪ್ರಾಮಾಣಿಕತೆಯಿಂದ ಕೊಡುಗೆ ನೀಡಲು ಸಹಕಾರಿಯಾಗುವುದು ಎಂದು ಹೇಳಿದರು.
ಚೆನ್ನೈನ ಸೀನಿಯರ್ ಬಿಜಿನೆಸ್ ರಿಲೇಷನ್ಶಿಪ್ ಮ್ಯಾನೇಜರ್ ಆಲ್ತ್ ಲೀ ಕಾರ್ಯಗಾರದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನವ ದೆಹಲಿಯ ರಿಜಿನಲ್ ಹೆಡ್ ಆಫ್ ಲರ್ನಿಂಗ್ ಅಂಡ್ ಎಜುಕೇಶನ್ ನ ಡಾ. ಪಲ್ಲವಿ ಗುಪ್ತ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಪ್ರೀತಿ ಕೀರ್ತಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರೊಫೆಸರ್. ಮುನಿರಾಜು, ಪ್ರೊಫೆಸರ್. ಈಶ್ವರ ಪಿ. ಮತ್ತು ಪ್ರೊಫೆಸರ್. ಪರಮೇಶ್ವರ ಉಪಸ್ಥಿತರಿದ್ದರು.
ಪ್ರೊಫೆಸರ್. ಪರಮೇಶ್ವರ ಸ್ವಾಗತಿಸಿದರೆ ರಮ್ಯ ರಾಮಚಂದ್ರ ನಾಯ್ಕ್ ವಂದಿಸಿದರು. ಸಂಶೋಧನಾ ವಿದ್ಯಾರ್ಥಿ ಕಿಶು ಕೈ ಪ್ರಾರ್ಥಿಸಿದರೆ, ಕಾರ್ಯಕ್ರಮದ ನಿರೂಪಣೆಯನ್ನು ರಶ್ಮಿತಾ ಆರ್. ಕೋಟ್ಯಾನ್ ಗೈದರು.
ಉದ್ಘಾಟನಾ ಸಮಾರಂಭದ ಬಳಿಕ ಚೆನ್ನೈನ ಬಿಜಿನೆಸ್ ರಿಲೇಷನ್ಶಿಪ್ ಮೆನೇಜರ್ ಸುಹಾಸ್ ಕುಮಾರ್ ಸಿಂಗ್ ಮತ್ತು ಬೆಂಗಳೂರಿನ ಐ.ಎಫ್. ಆರ್.ಎಸ್ ನ ತರಬೇತುದಾರರಾದ ಪ್ರಶಾಂತ್ ಶಂಕರ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿಯನ್ನು ನೀಡಿದರು. ಕಾರ್ಯಗಾರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳಿಂದ ನೂರಕ್ಕೂ ಅಧಿಕ ಮಂದಿ ವಾಣಿಜ್ಯ ಉಪನ್ಯಾಸಕರು ಭಾಗವಹಿಸಿದ್ದರು.