ಉಡುಪಿ: ಡಿಸೆಂಬರ್ 27:ಉಡುಪಿಯ ಅಂಬಲಪಾಡಿ ಜಂಕ್ಷನ್ ನಲ್ಲಿ ಶುಕ್ರವಾರ (ಡಿ.27) ಮುಂಜಾನೆ 3 ಗಂಟೆ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಗೆ ಅಗೆದಿರುವ ಬೃಹತ್ ಹೊಂಡಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮಗುಚಿ ಬಿದ್ದ ಘಟನೆ ನಡೆದಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಕೇರಳ ನೋಂದಣಿ ಸಂಖ್ಯೆಯ ಕಾರಿನಲ್ಲಿ ಐದು ಮಂದಿ ಪ್ರಯಾಣಿಕರು ಕೊಲ್ಲೂರಿಗೆ ಪ್ರಯಾಣಿಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಜಂಕ್ಷನ್ ನಲ್ಲಿ ಮೇಲ್ಸೇತುವೆಯ ಪಿಲ್ಲರ್ ನಿರ್ಮಿಸಲು ಬಹೃತ್ ಹೊಂಡ ಅಗೆಯಲಾಗಿದ್ದು ಈ ಹೊಂಡಕ್ಕೆ ಮಗುಚಿ ಬಿದ್ದಿದೆ.
ಘಟನಾ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ಮುನ್ನಚ್ಚರಿಕಾ ಕ್ರಮವಾಗಿ ಹೊಂಡದ ಸುತ್ತ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.