ಉಡುಪಿ :ಡಿಸೆಂಬರ್ 26:ಕೊರಗ ಸಂಘಗಳ ಒಕ್ಕೂಟದ ನಿಯೋಗವು ಶಾಸಕರ ಕಚೇರಿಗೆ ಭೇಟಿ ನೀಡಿ ತಾಲೂಕು ವ್ಯಾಪ್ತಿಯ ಕೊರಗ ಸಮುದಾಯದ ಕುಟುಂಬಗಳಿಗೆ ಸರ್ಕಾರಿ ಭೂಮಿ ಮಂಜೂರಾತಿ ಹಕ್ಕು ಪತ್ರ ನೀಡುವ ಕುರಿತು ಮನವಿ ನೀಡಿ ಮಾತುಕತೆ ನಡೆಸಲಾಯಿತು. ಈ ಹಿಂದೆ ಸಂಘಟನೆಯ ವತಿಯಿಂದ ಸಭೆ ನಡೆಸಿ ಭೂರಹಿತರಿಂದ ದರ್ಕಾಸು ಅರ್ಜಿ ಸಂಗ್ರಹಿಸಿ ದಿನಾಂಕ 04.11.2022 ರಂದು ಶಾಸಕರು, ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ತಾಲೂಕು ತಹಶೀಲ್ದಾರ್ ರವರಿಗೆ ಅರ್ಜಿ ಸಲ್ಲಿಸಿರುತ್ತೇವೆ. ಆದರೆ ಎರಡು ವರ್ಷಗಳು ಕಳೆದರೂ ಯಾವುದೇ ರೀತಿಯಲ್ಲಿ ಭೂಮಿಯ ಹಂಚಿಕೆ ಹಕ್ಕು ಪತ್ರ ನೀಡುವ ಬಗ್ಗೆ ಯಾವುದೇ ಕ್ರಮ ವಹಿಸಿರುವುದಿಲ್ಲ. ಆದ್ದರಿಂದ ಸಂಘಟನೆಯ ವತಿಯಿಂದ ಮತ್ತೊಮ್ಮೆ ಭೂ ಮಂಜೂರಾತಿಗಾಗಿ ಕಾಪು ವಿಧಾನಸಭಾ ಕ್ಷೇತ್ರ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ರವರಿಗೆ ಮನವಿ ಸಲ್ಲಿಸಿದ್ದು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾಪು ತಾಲೂಕು ತಹಶೀಲ್ದಾರ್ ಕಚೇರಿಯೆದುರು ಭೂಮಿಗಾಗಿ ಕೊರಗ ಸಂಘಗಳ ಒಕ್ಕೂಟದ ಧರಣಿ ಸತ್ಯಾಗ್ರಹದ ನಿರ್ಧಾರ
ದಿನಾಂಕ 20.01.2025 ರ ಒಳಗೆ ಭೂಮಿ ಮಂಜೂರಾತಿ ಪ್ರಕ್ರಿಯೆ ಆರಂಭಿಸದಿದ್ದಲ್ಲಿ ದಿನಾಂಕ 22.01.2025 ರಂದು ಕಾಪು ತಾಲೂಕು ಕಚೇರಿ ಎದುರು ಅಹೋರಾತ್ರಿ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಕಾಪು ತಹಶೀಲ್ದಾರರಿಗೆ ಮನವಿ ಮಾಡಲಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಕಾಪು ತಶೀಲ್ದಾರರು ತಿಳಿಸಿರುತ್ತಾರೆ.
ಒಕ್ಕೂಟದ ನಿಯೋಗದಲ್ಲಿ ಪುತ್ರನ್ ಹೆಬ್ರಿ, ನರಸಿಂಹ ಪೆರ್ಡೂರು, ಶೇಖರ್ ಕೆಂಜೂರು, ಬೊಗ್ರ ಕೊಕ್ಕರ್ಣೆ, ವಿನಯ ಅಡ್ವೇ, ಕಾಪು ಸಂಘದ ಅಧ್ಯಕ್ಷರಾದ ಶೇಖರ್ ಎಡ್ಮರ್, ಭಾರತಿ ಕಾಪು, ಸುನಿತಾ ಶಿರ್ವ, ಪ್ರತಿಭಾ ಕಳ್ತುರು, ಸುಂದರಿ ಪಿಲಾರ್, ಅನಿತಾ ಕುರ್ಕಾಲು, ಪೂರ್ಣಿಮಾ ಮಲ್ಲಾರು, ಸ್ವಾತಿ ಮುದರಂಗಡಿ, ಗುಣಕರ ಪಾಂಗಾಳ, ಅರುಣಾ ಮಜೂರು, ಸರೋಜಿನಿ ಉಚ್ಚಿಲ ಹಾಗೂ ಇತರರು ಉಪಸ್ಥಿತರಿದ್ದರು.