ಬೆಂಗಳೂರು : ಡಿಸೆಂಬರ್ 20: ಪುಣ್ಯಕ್ಷೇತ್ರಗಳ ದರ್ಶನಕ್ಕೆ 17 ಸಾವಿರ ರೂ. ಸಹಾಯಧನ ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ರಾಜ್ಯ ಸರ್ಕಾರವು ಹೊಸ ವರ್ಷಕ್ಕೆ ದ್ವಾರಕ, ಪುರಿ, ಜಗನ್ನಾಥ, ದಕ್ಷಿಣ ಭಾರತ ಕ್ಷೇತ್ರಗಳ ಯಾತ್ರೆಗೆ ತೆರಳುವ ಭಕ್ತರಿಗೆ 3 ಪ್ರವಾಸಿ ಪ್ಯಾಕೇಜ್ ಗಳನ್ನು ಧಾರ್ಮಿಕ ದತ್ತಿ ಇಲಾಖೆ ಮಾಡಿದ್ದು, ಕರ್ನಾಟಕ ಭಾರತ್ ಗೌರವ್ ಯಾತ್ರೆ ಸಹಾಯಧನ ಘೋಷಿಸಲಾಗಿದೆ.
ದಕ್ಷಿಣ ಯಾತ್ರೆಯು ಜನವರಿ 25 ರಿಂದ ಜನವರಿ 30ರವರೆಗೆ ಇರಲಿದ್ದು, ರಾಮೇಶ್ವರ, ಕನ್ಯಾಕುಮಾರಿ, ಮಧುರೆ, ತಿರುವನಂತಪುರಂಗೆ ಆರು ದಿನ ಪ್ರಯಾಸ ಇರಲಿದೆ. ಇದಕ್ಕೆ 25,000 ರೂ. ವೆಚ್ಚವಾಗಲಿದ್ದು, ಸರ್ಕಾರ 15000 ಭರಿಸಲಿದೆ. ಯಾತ್ರಾರ್ಥಿಗಳು 10,000 ರೂ.ನೀಡಬೇಕಿದೆ. ಬೆಂಗಳೂರು ಸರ್.ಎಂ.ವಿ. ರೈಲ್ವೆ ನಿಲ್ದಾಣ, ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರಿನಲ್ಲಿ ರೈಲು ಹತ್ತಿ ಇಳಿಯಬಹುದು.
ದ್ವಾರಕ, ನಾಗೇಶ್ವರ, ಸೋಮನಾಥ, ತ್ರಯಂಬಕೇಶ್ವರ ಒಳಗೊಂಡಂತೆ 8 ದಿನಗಳ ಯಾತ್ರಾ ಪ್ಯಾಕೇಜ್. ಪುರಿ, ಕೊನಾರ್ಕ್, ಗಂಗಾಸಾಗರ, ಕೊಲ್ಕತ್ತಾ ಒಳಗೊಂಡ 8 ದಿನಗಳ ಯಾತ್ರಾ ಪ್ಯಾಕೇಜ್ ಇದ್ದು, ಇವುಗಳಿಗೆ 32,500 ರೂ. ವೆಚ್ಚವಾಗುತ್ತದೆ. ಸರ್ಕಾರ 17500 ರೂ. ಭರಿಸಲಿದ್ದು, ಉಳಿದ 15 ಸಾವಿರ ರೂ.ಗಳನ್ನು ಯಾತ್ರಿಕರು ಪಾವತಿಸಬೇಕಿದೆ. ಜನವರಿ 6ರಂದು ದ್ವಾರಕ ಯಾತ್ರೆ ಹೊರಡಲಿದ್ದು, ಜನವರಿ 13ರಂದು ಮುಗಿಯಲಿದೆ. ಪುರಿ ಜಗನ್ನಾಥ ದರ್ಶನಕ್ಕೆ ಜನವರಿ 3ರಂದು ರೈಲು ಹೊರಡಲಿದ್ದು, ಫೆಬ್ರವರಿ 10ರಂದು ಮುಗಿಯಲಿದೆ.