ಅಂಕೋಲಾ:ಡಿಸೆಂಬರ್ 16: ವೃಕ್ಷಮಾತೆ ಎಂದೆನಿಸಿಕೊಂಡ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಅವರು ವಯೋ ಸಹಜ ಅನಾರೋಗ್ಯದಿಂದ ಸೋಮವಾರ(ಡಿ16) ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. . ಅವರಿಗೆ 80 ವರ್ಷ ವಯಸಾಗಿತ್ತು.
ಪದ್ಮಶ್ರೀ ಸುಕ್ರಿ ಬೊಮ್ಮು ಗೌಡ ಅವರ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನದೇ ವಿಶಿಷ್ಠ ಸಾಧನೆಯ ಮೂಲಕ ಗಮನ ಸೆಳೆದ ಮಹಿಳಾ ಸಾಧಕಿ ತುಳಸಿ ಗೌಡ ಅತೀ ದೊಡ್ಡ ಪರಿಸರ ಪ್ರೇಮಿಯಾಗಿದ್ದರು. ಲಕ್ಷಕ್ಕೂ ಹೆಚ್ಚು ಮರ ಬೆಳೆಸಿದ್ದ ತುಳಸಿ ಅವರು ಕಟ್ಟಿಗೆ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು.ಮತ್ತಿಘಟ್ಟ ಅರಣ್ಯ ನರ್ಸರಿಯಲ್ಲಿ ಸೇವೆ ಮಾಡಿ ನಿವೃತ್ತರಾಗಿದ್ದರು.ಯುವ ಜನಾಂಗಕ್ಕೆ ನಿರಂತರ ತರಬೇತಿ, ಮಾರ್ಗದರ್ಶನ ನೀಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದರು.
ಹಾಲಕ್ಕಿ ಸಮುದಾಯದ ಜಾನಪದ ಕಲಾವಿದೆಯೂ ಆಗಿದ್ದ ತುಳಸಿ ಗೌಡ ಅವರ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಒಲಿದು ಬಂದಿತ್ತು.