ಉಡುಪಿ :ಡಿಸೆಂಬರ್ 09:ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಮೋಚ್ಚ ವರಿಷ್ಠ , ಸರಸಂಘಚಾಲಕ ಡಾ ಮೋಹನ್ ಭಾಗವತ್ ಭಾನುವಾರ ಸಂಜೆ ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು .
ಬಳಿಕ ಗೀತಾಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಸನಾತನ ಧರ್ಮ ಸಂರಕ್ಷಣೆಯ ಕಾರ್ಯದಲ್ಲಿ ನೀಡಿದ ಮಹೋನ್ನತ ಸೇವೆಯನ್ನು ಪರಿಗಣಿಸಿ ಹಿಂದು ಸಾಮ್ರಾಟ್ ಎಂಬ ಬಿರುದು ಹಾಗೂ ಶ್ರೀ ಕೃಷ್ಣ ಗೀತಾನುಗ್ರಹ ಪ್ರಶಸ್ತಿ ಸಹಿತ ಸಂಮಾನಿಸಿ ಶ್ರೀ ಕೃಷ್ಣ ಮುಖ್ಯಪ್ರಾಣರ ಪ್ರಸಾದವಿತ್ತು ಅನುಗ್ರಹಿಸಿದರು. ಸಂಮಾಮವು ಬೃಹತ್ ಕಡಗೋಲು , ರಜತಫಲಕ ಶಾಲು ಫಲಪುಷ್ಪವನ್ನು ಒಳಗೊಂಡಿತ್ತು.
ಶ್ರೀಕೃಷ್ಣ ದರ್ಶನದ ಬಳಿಕ ಡಾ ಭಾಗವತ್ ಗೀತಾಮಂದಿರಕ್ಕೆ ಭೇಟಿ ನೀಡಿದರು .ಶ್ರೀಗಳು ಅಲ್ಲಿನ ಗೀತಾಶಿಲಾ ಲೇಖನ ಧ್ಯಾನ ಮಂದಿರ ,ವಾದಿರಾಜ ಸಂಶೋಧನ ಮಂದಿರಗಳನ್ನು ಪರಿಚಯಿಸಿ ನಡೆಸುತ್ತಿರುವ ಚಟುವಟಿಕೆಗಳನ್ನು ವಿವರಿಸಿದರು. ತಮ್ಮ ಚತುರ್ಥ ಪರ್ಯಾಯಾವಧಿಯ ಅತ್ಯಂತ ದೂರದೃಷ್ಟಿಯ ಕೋಟಿ ಗೀತಾಲೇಖನ ಯಜ್ಞದ ಕುರಿತೂ ವಿವರಿಸಿದರು.
ಈ ಎಲ್ಲವುಗಳನ್ನೂ ಆಸಕ್ತಿಯಿಂದ ಆಲಿಸಿದ ಭಾಗವತ್ ಬಹಳ ಸಂತೋಷ ವ್ಯಕ್ತಪಡಿದರು .
ಗೀತೋತ್ಸವ ಸಂದರ್ಭದಲ್ಲಿಯೇ ಆಗಮಿಸಿದ ಡಾ ಭಾಗವತರಿಗೆ ಗೀತಾಲೇಖನ ಯಜ್ಞದ ದೀಕ್ಷೆಯನ್ನು ಪೂಜ್ಯ ಶ್ರೀಪಾದರು ನೀಡಿದರು.
ವರ್ತಮಾನದಲ್ಲಿ ದೇಶ ಮತ್ತು ಬಾಂಗ್ಲಾ ಮೊದಲಾದೆಡೆಗಳಲ್ಲಿ ನಡೆಯುತ್ತಿರುವ ಹಿಂದು ವಿರೋಧಿ ವಿದ್ಯಮಾನಗಳ ಕುರಿತಾಗಿಯೂ ಈರ್ವರೂ ಖಾಸಗಿಯಾಗಿ ಗಹನ ಚರ್ಚೆ ನಡೆಸಿದರು. ಸನಾತನ ಧರ್ಮದ ರಕ್ಷಣೆ ಪೋಷಣೆ ಸಂವರ್ಧನೆಯ ವಿಚಾರದಲ್ಲಿ ಪ್ರತಿಯೊಬ್ಬ ಹಿಂದು ಶೂನ್ಯ ಸಹಿಷ್ಣುವಾಗಿರಬೇಕು ಮತ್ತು ಸಮಸ್ತ ಸಾಧು ಸಂತ ಸಮಾಜ ಹಿಂದೆಂದಿಗಿಂತ ಹೆಚ್ಚು ಸಮರ್ಥವಾಗಿ ಸಮಾಜಕ್ಕೆ ಧಾರ್ಮಿಕ ಮೌಲ್ಯಗಳು ಮತ್ತು ರಾಷ್ಟ್ರೀಯ ವಿಚಾರಧಾರೆಗಳ ಮಾರ್ಗದರ್ಶನ ನೀಡಬೇಕೆಂದು ಅನಿಸಿಕೆ ವ್ಯಕ್ತ ಪಡಿಸಿದರು.
ಶತಮಾನದ ಹೊಸ್ತಿಲಲ್ಲಿರುವ ಸಂಘವು ದೇಶದಲ್ಲಿ ಸನಾತನ ಧರ್ಮದ ಅಸ್ಮಿತೆಯನ್ನು ಸಂರಕ್ಷಿಸುವಲ್ಲಿ ನೀಡುತ್ತಿರುವ ಕೊಡುಗೆಗಳ ಬಗ್ಗೆ ಅತೀವ ಪ್ರಶಂಸೆ ವ್ಯಕ್ತಪಡಿಸಿದ ಶ್ರೀಗಳು ಸಂಘವಿಲ್ಲದಿದ್ದರೆ ಹಿಂದೂಗಳು ದೇಶದಲ್ಲಿ ಮತ್ತಷ್ಟು ಬವಣೆಗಳನ್ನು ಅನುಭವಿಸಬೇಕಾದ ಸಂಭವ ಇತ್ತು .ಆದರೆ ಹೆಡಗೇ ವಾರರಿಂದ ಭಾಗವತ್ ರ ತನಕ ಸಂಘವನ್ನು ಮುನ್ನಡೆಸಿದ ಸಮಸ್ತ ನೇತಾರರೂ ತಮ್ಮ ರಾಷ್ಟ್ರೀಯ ಬದ್ಧತೆ ಹಾಗೂ ತ್ಯಾಗಪೂರ್ಣ ಬದುಕಿನಿಂದ ಅಸಂಖ್ಯ ಜನರಲ್ಲಿ ರಾಷ್ಟ್ರ ಭಕ್ತಿಯ ತೇಜಸ್ಸನ್ನು ಜಾಗೃತಗೊಳಿಸಿದ ಪರಿ ಅನನ್ಯ ಮತ್ತು ಅದ್ಭುತ ಎಂದೂ ಬಣ್ಣಿಸಿ , ವರ್ತಮಾನದ ಸಂಕೀರ್ಣ ಸ್ಥಿತಿಯಲ್ಲಿ ಭಾಗವತರಂಥವರ ಮತ್ತು ಸಂಘ ಶಕ್ತಿಯ ಅನಿವಾರ್ಯತೆ ಇದೆ . ಬಹುಕಾಲ ಅವರ ಸೇವೆ ಮಾರ್ಗದರ್ಶನಗಳು ದೇಶಕ್ಕೆ ಲಭಿಸುವಂತಾಗಲಿ ಎಂದು ಹಾರೈಸಿದರು . ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರಿಂದಲೂ ಭಾಗವತ್ ಆಶೀರ್ವಾದ ಪಡೆದರು
ಸಂಘದ ಹಿರಿಯ ಮುಖಂಡ ಮುಕುಂದ ಜೀ ,ಉಡುಪಿಯ ಪ್ರಮುಖ್ ನರತನ್ ಶೆಣೈ,ಮಠದ ದಿವಾನರಾದ ಎಂ ನಾಗರಾಜ ಆಚಾರ್ಯ ,ಮಟ್ಟಿ ಲಕ್ಷ್ಮಿನಾರಾಯಣ ರಾವ್,ಪ್ರಮೋದ್ ಸಾಗರ್ ಸಂತೋಷ್ ಶೆಟ್ಟಿ ,,ಶ್ರೀ ಮಠದ ವೈದಿಕ ವಿದ್ವಾಂಸರು,ಗಣ್ಯ ನಾಗರಿಕರು ಮೊದಲಾದವರು ಭಾಗವಹಿಸಿದ್ದರು.
ಆರಂಭದಲ್ಲಿ ಮಠದ ಮುಂಭಾಗದಲ್ಲಿ ಭಾಗವತ್ ಅವರನ್ನು ವಾದ್ಯ, ಚಂಡೆವಾದನ ಮಂತ್ರಘೋಷ ಸಹಿತ ಮಠದ ಸಾಂಪದ್ರದಾಯಿಕ ಗೌರವಗಳೊಂದಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು .