ಕಾರ್ಕಳ : ಡಿಸೆಂಬರ್ 04:ನಂದಿಕೂರು ಅದಾನಿ ಉಷ್ಣ ವಿದ್ಯುತ್ ಸ್ಥಾವರದಿಂದ ಪಕ್ಕದ ಕೇರಳ ರಾಜ್ಯಕ್ಕೆ ವಿದ್ಯುತ್ ಸರಬರಾಜಿಗಾಗಿ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶದಲ್ಲಿ ಹೈ ಟೆನ್ಷನ್ ವಿದ್ಯುತ್ ತಂತಿಗಳನ್ನು ಅವೈಜ್ಞಾನಿಕವಾಗಿ ಅಳವಡಿಸುವ ಕಾಮಗಾರಿಯನ್ನು ಆರಂಭಿಸಲು ಕಂಪೆನಿಯ 10 ಮಂದಿ ಸಿಬ್ಬಂದಿ ಪೊಲೀಸ್ ರಕ್ಷಣೆಯೊಂದಿಗೆ ಮಂಗಳವಾರ ಬೆಳಿಗ್ಗೆ 6 ಗಂಟೆಗೆಕಾಮಗಾರಿ ನಡೆಸಲು ಮುಂದಾಗಿದ್ದರು.
ಈ ವಿಚಾರ ಒಮ್ಮಿಂದೊಮ್ಮೆಗೆ ವ್ಯಾಪಕವಾಗಿ ಹರಡಿ ಗ್ರಾಮಸ್ಥರು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿದರು. ಪಕ್ಷಗಳ ಪ್ರಮುಖರು ಆಗಮಿಸಿದರು. ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿದರು. ಸ್ಥಳೀಯರು ಪ್ರತಿಭಟನೆಗೆ ಮುಂದಾದರು. ಜನಪ್ರತಿನಿಧಿಗಳು ಜಿಲ್ಲಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದರು. ಪರಿಸ್ಥಿತಿ ವಿಕೋಪಕ್ಕೆ ಸಾಗುತ್ತಿರುವುದನ್ನು ಮನಗಂಡ ಸಿಬ್ಬಂದಿ ಕಾಮಗಾರಿ ಸ್ಥಗಿತಗೊಳಿಸಿ ವಾಪಸ್ಸಾದರು.
ಹೋರಾಟ ಸಮಿತಿಯ ಅಮರ್ ನಾಥ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು, ಜಿ.ಪಂ. ಮಾಜಿ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಪಂಚಾಯತ್ ಮಾಜಿ ಅಧ್ಯಕ್ಷ ಕುಶ ಆರ್. ಮೂಲ್ಯ, ದೀಪಕ್ ಕೋಟ್ಯಾನ್, ಜಯ ಕೋಟ್ಯಾನ್, ಯೋಗೀಶ್ ಆಚಾರ್ಯ, ಬಿಜೆಪಿ ಪ್ರಮುಖರಾದ ಸತೀಶ್ ಪೂಜಾರಿ, ದೆವೇಂದ್ರ ಶೆಟ್ಟಿ, ಊರಿನ ಪ್ರಮುಖರಿದ್ದರು.