ಬೆಂಗಳೂರು :ಡಿಸೆಂಬರ್ 04:ಈ ವರ್ಷ ನಾಲ್ಕು ಬಗೆಯ ವಿಕಲಚೇತನರ ಆರೈಕೆದಾರರಿಗೆ ಪ್ರತಿ ಮಾಹೆ 1000 ರೂ. ಗಳ ಆರೈಕೆದಾರರ ಭತ್ಯೆ ನೀಡುವ ಯೋಜನೆಯನ್ನು ದೇಶದಲ್ಲಿ ಪ್ರಪ್ರಥಮವಾಗಿ ಕರ್ನಾಟಕ ರಾಜ್ಯ ಘೋಷಿಸಿದೆ, ಇದನ್ನು ಪ್ರಸಕ್ತ ಸಾಲಿನಿಂದ ನೀಡಲಾಗುವುದು ಎಂದು ಹೇಳಿದ್ದಾರೆ.ಸಂವಿಧಾನದಲ್ಲಿ ಎಲ್ಲರೂ ಬದುಕುವ, ಉದ್ಯೋಗ ಪಡೆಯುವಂತಹ ಅವಕಾಶವನ್ನು ಕಲ್ಪಿಸಿದೆ.
ವಿಕಲಚೇತನರು ಸಮಾಜಕ್ಕೆ ಹೊರೆಯಲ್ಲ. ಅವರು ಸಮಾಜದ ಆಸ್ತಿಯಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಈ ಬಾರಿ ವಿಶ್ವ ವಿಕಲಚೇತನರ ದಿನಾಚರಣೆಯನ್ನು “ಸಮಗ್ರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವದ ಉತ್ತೇಜನ” ಎಂಬ ಘೋಷ ವಾಕ್ಯದೊಂದಿಗೆ ಆಚರಿಸಿದ್ದೇವೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ
ದೈಹಿಕ ಅಥವಾ ಮಾನಸಿಕ ನ್ಯೂನ್ಯತೆಯಿಂದ ಬಳಲುವ ಮಕ್ಕಳನ್ನು ತಾತ್ಸಾರ ದೃಷ್ಟಿಯಿಂದ ನೋಡದೆ, ಆ ನಿಷ್ಕಲ್ಮಶ ಜೀವಗಳಿಗೆ ಬೊಗಸೆಯಷ್ಟು ಪ್ರೀತಿ ನೀಡಿ ನೋಡಿ, ಮರಳಿ ಬೆಟ್ಟದಷ್ಟು ಪ್ರೀತಿ ತೋರುತ್ತಾರೆ. ಪ್ರತಿ ಮಗುವೂ ಪ್ರತಿಭಾಶಾಲಿಯೇ, ಅವರ ಪ್ರತಿಭೆಯನ್ನು ಗುರುತಿಸಿ, ಬೆಂಬಲಿಸುವ ಕೆಲಸ ನಮ್ಮದಾಗಬೇಕು. ವಿಶೇಷ ಚೇತನರನ್ನು ಸಮಾಜದ ಆಸ್ತಿಯಾಗಿ ಪರಿವರ್ತಿಸುವ ಹೊಣೆ ಮಕ್ಕಳ ಪೋಷಕರ ಜೊತೆಗೆ ನಮ್ಮೆಲ್ಲರದ್ದು. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಶ್ರಮಿಸೋಣ, ಮಕ್ಕಳ ಕನಸುಗಳಿಗೆ ಬಣ್ಣ ತುಂಬೋಣ ಎಂದು ಹೇಳಿದ್ದಾರೆ.