ಮಂಗಳೂರು :ನವೆಂಬರ್ 27: ಎರಡು ಶಾಲೆಗಳಿಗೆ ಕಳ್ಳರು ನುಗ್ಗಿ ಕಳ್ಳತನ ಮಾಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರ್, ಕೊಲ್ಯದಲ್ಲಿ ಕಳೆದ ರಾತ್ರಿ ನಡೆದಿದೆ.
ಒಂದು ಶಾಲೆಯಲ್ಲಿ ಪಿಕ್ನಿಕ್ ಗಾಗಿ ಮಕ್ಕಳಿಂದ ಸಂಗ್ರಹಿಸಿಟ್ಟಿದ್ದ ಹಣವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ
ಕೊಲ್ಯದ ಸಂತ ಜೋಸೆಫರ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಕೋಟೆಕಾರಿನ ಸ್ಟೆಲ್ಲಾ ಮೇರಿಸ್ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಈ ಕಳ್ಳತನ ನಡೆದಿದೆ.
ಕೊಲ್ಯ ಜಾಯ್ ಲ್ಯಾಂಡ್ ಶಾಲೆಗೆ ನುಗ್ಗಿದ ಕಳ್ಳರು ಶಾಲೆಯ ಸಿಸಿಟಿವಿ ಕ್ಯಾಮರಾವನ್ನು ತಿರುಗಿಸಿ ಪ್ರಾಂಶುಪಾಲರ ಕಚೇರಿ ಕಪಾಟುಗಳ ಬೀಗ ಒಡೆದಿದ್ದಾರೆ. ಅಲ್ಲದೆ ವಿಧ್ಯಾರ್ಥಿಗಳಿಂದ ಪಕ್ನಿಕ್ ಗಾಗಿ ಸಂಗ್ರಹಿಸಿಟ್ಟಿದ್ದ 26 ಸಾವಿರ ರೂಪಾಯಿ ಹಣವನ್ನು ದೋಚಿದ್ದಾರೆ.
ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಶಾಲೆಗೆ ಬುಧವಾರ ಮುಂಜಾನೆ 4:30 ಗಂಟೆ ವೇಳೆಗೆ ಕಳ್ಳರು ನುಗ್ಗಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳನು ಸಿಸಿಟಿವಿ ಕ್ಯಾಮರಾದಲ್ಲಿ ಮುಖ ಚಹರೆ ಕಾಣದಿರಲು ಮ್ಯಾಟನ್ನು ಅಡ್ಡ ಹಿಡಿದು ಪ್ರವೇಶಿಸಿರುವ ದೃಶ್ಯವು ಸಿಸಿಟಿವಿಯಲ್ಲಿ ದಾಖಲಾಗಿದೆ. ಶಾಲಾ ಕಚೇರಿ, ಸ್ಟಾಪ್ ರೂಂನ ಕಪಾಟುಗಳನ್ನು ಒಡೆದು ತಡಕಾಡಿದ ಕಳ್ಳ ನಗದು ಕಳವುಗೈದಿದ್ದಾನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ.