ಕೊಲ್ಲೂರು : ನವೆಂಬರ್ 21:ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ಭೇಟಿ ನೀಡಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್,ಬಿಪಿಎಲ್ ಕಾರ್ಡ್ ದಾರರು ಆತಂಕ ಪಡುವ ಅಗತ್ಯವಿಲ್ಲ. ಅರ್ಹ ಬಿಪಿಎಲ್ ಕಾರ್ಡ್ ದಾರರಿಗೆ ಅನ್ಯಾಯವಾಗಲು ಸರ್ಕಾರ ಬಿಡುವುದಿಲ್ಲ ಎಂದರು
ಬಿಪಿಎಲ್ ಕಾರ್ಡ್ ನವರಿಗೆ ಗೊಂದಲ ಬೇಡ.ಯಾವುದೇ ಕಾರಣಕ್ಕೂ ಬಿಪಿಎಲ್ ಅರ್ಹರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅರ್ಹರ ಕಾರ್ಡ್ ಗಳು ರದ್ದಾಗಿದ್ದರೆ ಈ ಬಗ್ಗೆ ಪಟ್ಟಿ ಕೊಡಬೇಕು ಎಂದು ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡಲಾಗಿದೆ. ವಂಚಿತರಿಗೆ ಮರು ಅರ್ಜಿ ಹಾಕಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಸೂಚನೆ ನೀಡಿದ್ದೇವೆ ಎಂದರು.
ರಾಜ್ಯ, ತಾಲ್ಲೂಕು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಗಳು ಇದರ ಬಗ್ಗೆ ಪರಿಶೀಲನೆ ಮಾಡಲಿವೆ. ಒಬ್ಬನೇ ಒಬ್ಬ ಬಡವನಿಗೂ ತೊಂದರೆ ಆಗಲು ಬಿಡುವುದಿಲ್ಲ ಎಂದು ಸರ್ಕಾರದ ಪ್ರತಿನಿಧಿಯಾಗಿ, ಪಕ್ಷದ ಅಧ್ಯಕ್ಷನಾಗಿ ನಾನು ಭರವಸೆ ನೀಡುತ್ತೇನೆ. ಯಾರೂ ಭಯ ಪಡುವ ಅಗತ್ಯವಿಲ್ಲ ಎಂದರು
ಪತ್ನಿ ಉಷಾ ಹಾಗೂ ಪುತ್ರಿ ಐಶ್ವರ್ಯಾ ಅವರೊಂದಿಗೆ ಬಂದಿದ್ದ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಜೊತೆಗಿದ್ದರು.
ಅರ್ಚಕರಾದ ಎನ್. ನರಸಿಂಹ ಅಡಿಗ, ಶ್ರೀಧರ ಅಡಿಗ, ಎನ್.ಸುಬ್ರಮಣ್ಯ ಅಡಿಗ, ವಿಘ್ನೇಶ್ವರ ಅಡಿಗ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.