ಉಡುಪಿ : ನವೆಂಬರ್ 15:ಉಡುಪಿ, ಕುಂದಾಪುರ, ಕಾರ್ಕಳ ಹಾಗು ಬೈಂದೂರು ನ್ಯಾಯಾಲಯದಲ್ಲಿ ಡಿ.14 ರಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ
ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರದಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್.ಎಸ್.ಗಂಗಣ್ಣನವರ್ ಮಾಹಿತಿ ನೀಡಿದರು.
ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಈ ಮೂಲಕ ತತ್ಕ್ಷಣ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅದಾಲತ್ನಲ್ಲಿ ಸಾರ್ವಜನಿಕರು ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣ, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರಣ,
ರಾಜ್ಯ ರಿಯಲ್ ಎಸ್ಟೇಟ್ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಪ್ರಕರಣ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ, ಸಾಲ ವಸೂಲಾತಿ ನ್ಯಾಯಾಧೀಕರಣದ ಪ್ರಕರಣ, ವೈವಾಹಿಕ ಪ್ರಕರಣಗಳು, ಜಿಲ್ಲಾ ಗ್ರಾಹಕ ಪರಿಹಾರ ಆಯೋಗದಲ್ಲಿನ ಪ್ರಕರಣ, ಚೆಕ್ ಅಮಾನ್ಯ ಪ್ರಕರಣ, ಸಾಲ ವಸೂಲಾತಿ ನ್ಯಾಯಾಧೀಕರಣದ ಪ್ರಕರಣ, ಮೋಟಾರು ವಾಹನ ಪ್ರಕರಣ, ನ್ಯಾಯಾಧೀಕರಣದ ಪ್ರಕರಣ,ಕಾರ್ಮಿಕರ ವಿವಾದ, ವಿದ್ಯುತ್ ಹಾಗೂ ನೀರಿನ ಶುಲ್ಕಕ್ಕೆ ಸಂಬಂಧಿಸಿದ ಪ್ರಕರಣ, ಭೂಸ್ವಾಧೀನ ಪ್ರಕರಣ, ವೇತನ ಮತ್ತು ಭತ್ತೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣ ಹಾಗೂ ಪಿಂಚಣಿ ಪ್ರಕರಣ, ರಾಜಿಯಾಗಬಲ್ಲ ಸಿವಿಲ್ ಮತ್ತು ಇತರೆ ಪ್ರಕರಣ ಹಾಗೂ ಖಾಯಂ ಜನತಾ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್.ಯೋಗೇಶ್ ಉಪಸ್ಥಿತರಿದ್ದರು.