ಉಡುಪಿ, ನವೆಂಬರ್, 09: ಮಕ್ಕಳಾ ರಕ್ಷಣಾ ಘಟಕದ ವತಿಯಿಂದ ನವೆಂಬರ್ ತಿಂಗಳಲ್ಲಿ ಕಾನೂನು ಬದ್ಧ ದತ್ತು ಪ್ರಕ್ರಿಯೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ದತ್ತು ಮಾಸಾಚರಣೆ ಆಚರಿಸಲಾಗುತ್ತಿದ್ದು, ಮಕ್ಕಳ ಮಾರಾಟ ಅಪರಾಧದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ಮಕ್ಕಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ವಾಗಿದ್ದು, ಮಕ್ಕಳನ್ನು ಮಾರುವ ಹಾಗೂ ಕೊಳ್ಳುವವರಿಗೆ ಬಾಲನ್ಯಾಯ ಕಾಯಿದೆ 2015ರ ಸೆಕ್ಷನ್ 80 ಮತ್ತು 81ರ ಅನ್ವಯ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ ದಂಡ ವಿಧಿಸಲಾಗುವುದು.
ಇಂತಹ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾಗಿದ್ದರೆ ಶಿಕ್ಷೆಯ ಅವಧಿ 3 ವರ್ಷಗಳವರೆಗೆ ಕಡಿಮೆ ಇಲ್ಲದಂತೆ 7 ವರ್ಷಗಳವರೆಗೆ ವಿಸ್ತರಣೆಗೆ ಅವಕಾಶ ಇರುತ್ತದೆ.
ಈ ಸಂಬಂಧ ಯಾವುದೇ ಅನಾಥ, ಪರಿತ್ಯಜಿಸಲ್ಪಟ್ಟ ಅಥವಾ ಒಪ್ಪಿಸಲ್ಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯವರು ದತ್ತು ಮುಕ್ತ ಎಂದು ಘೋಷಿಸಿ ಆದೇಶ ನೀಡಿದ ನಂತರ ಆಂತಹ ಮಕ್ಕಳು ದತ್ತು ಪ್ರಕ್ರಿಯೆಗೆ ಅರ್ಹರಾಗಿರುವರು. ದತ್ತು ಪಡೆಯಲು ಇಚ್ಚಿಸುವವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಧೃಡರಾಗಿರಬೇಕು ಮತ್ತು ಆರ್ಥಿಕವಾಗಿ ಮಗುವನ್ನು ಸಾಕುವ ಸಾಮರ್ಥ್ಯ ಹೊಂದಿರಬೇಕು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೃಷ್ಣಾನುಗೃಹ ದತ್ತು ಕೇಂದ್ರ, ಶ್ರೀಕೃಷ್ಣ ಚಾರಿಟೇಬಲ್ ಟ್ರಸ್ಟ್, ವಸುಂದರಾನಗರ, ಆಶೀರ್ವಾದ್ ರಸ್ತೆ, ಸಂತೆಕಟ್ಟೆ, ಉಡುಪಿ ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.