ನವದೆಹಲಿ, ನವೆಂಬರ್ 06: ಸರ್ಕಾರ ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಚಿಲ್ಲರೆ ಮಾರಾಟ ಯೋಜನೆ ಕೈಗೊಂಡಿದೆ. 2023ರ ಅಕ್ಟೋಬರ್ನಲ್ಲಿ ಮೊದಲ ಹಂತದ ರೀಟೇಲ್ ಸೇಲ್ಸ್ ಯೋಜನೆ ಆರಂಭವಾಗಿತ್ತು. ಈಗ ಎರಡನೇ ಹಂತದ ಸಬ್ಸಿಡಿ ಮಾರಾಟ ಆರಂಭಗೊಂಡಿದೆ. ಗೋಧಿ ಹಿಟ್ಟು, ಅಕ್ಕಿ ಮೊದಲಾದ ಆಹಾರವಸ್ತುಗಳನ್ನು ಈ ಎರಡನೇ ಹಂತದಲ್ಲಿ ಸರ್ಕಾರ ಮಾರುತ್ತಿದೆ. ಕಿಲೋಗೆ 30 ರೂನಂತೆ ಐದು ಕಿಲೋ ಗೋಧಿ ಹಿಟ್ಟಿನ ಪ್ಯಾಕೆಟ್ಗಳು ಖರೀದಿಗೆ ಲಭ್ಯ ಇವೆ. ಹಾಗೆಯೇ, ಕಿಲೋಗೆ 34 ರೂಗಳಂತೆ 10 ಕಿಲೋ ಅಕ್ಕಿ ಚೀಲ ವಿತರಿಸಲಾಗುತ್ತಿದೆ.
ಸರ್ಕಾರದ ವಿವಿಧ ಆಹಾರ ಮಾರಾಟ ಕೇಂದ್ರಗಳ ಮೂಲಕ ಇವುಗಳನ್ನು ಸಬ್ಸಿಡಿ ದರದಲ್ಲಿ ಮಾರಲಾಗುತ್ತಿದೆ. ‘ಗ್ರಾಹಕರಿಗೆ ಅನುಕೂಲ ಮಾಡಲು ಕೈಗೊಂಡಿರುವ ತಾತ್ಕಾಲಿಕ ಯೋಜನೆ ಇದು,’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಈ ಎರಡನೇ ಹಂತದ ಭಾರತ್ ಬ್ರ್ಯಾಂಡ್ ರೀಟೇಲ್ ಮಾರಾಟ ಯೋಜನೆಯಲ್ಲಿ ಕೇಂದ್ರ ಆಹಾರ ನಿಗಮದಿಂದ 3.69 ಲಕ್ಷ ಟನ್ ಗೋಧಿ ಮತ್ತು 2.91 ಲಕ್ಷ ಟನ್ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಇವುಗಳು ಖಾಲಿಯಾಗುವವರೆಗೂ ಸಬ್ಸಿಡಿ ದರದಲ್ಲಿ ಮಾರಾಟ ಮುಂದುವರಿಯಲಿದೆ. ಅದಾದ ಬಳಿಕ ಅಗತ್ಯ ಎನಿಸಿದಲ್ಲಿ ಮತ್ತಷ್ಟು ಗೋದಿ ಮತ್ತು ಅಕ್ಕಿಯನ್ನು ಸೇರಿಸಬಹುದು.
2023ರ ಅಕ್ಟೋಬರ್ನಿಂದ ಹಿಡಿದು 2024ರ ಜೂನ್ವರೆಗೆ ಸರ್ಕಾರವು ಭಾರತ್ ಬ್ರ್ಯಾಂಡ್ನಲ್ಲಿ ಮೊದಲ ಹಂತದ ಸಬ್ಸಿಡಿ ಸೇಲ್ಸ್ ಕೈಗೊಂಡಿತ್ತು. ಆಗ ಗೋಧಿಹಿಟ್ಟನ್ನು ಕಿಲೋಗೆ 27.5 ರೂ ಮತ್ತು ಅಕ್ಕಿಯನ್ನು 29 ರೂಗೆ ಮಾರಾಟ ಮಾಡಿತ್ತು. ಒಂಬತ್ತು ತಿಂಗಳಲ್ಲಿ 15.20 ಲಕ್ಷ ಟನ್ನ ಗೋಧಿ ಹಿಟ್ಟು, 14.58 ಲಕ್ಷ ಟನ್ನ ಅಕ್ಕಿಯನ್ನು ವಿತರಿಸಲಾಗಿತ್ತು.
ಈಗ ಎರಡನೇ ಹಂತದ ಭಾರತ್ ಬ್ರ್ಯಾಂಡ್ ರೀಟೇಲ್ ಸೇಲ್ಸ್ನಲ್ಲಿ ಗೋಧಿ ಹಿಟ್ಟು, ಅಕ್ಕಿ ಜೊತೆಗೆ ಕಡಲೆಬೇಳೆ, ಹೆಸರುಬೇಳೆಯ ಮಾರಾಟವೂ ಆಗಲಿದೆ. ಸದ್ಯ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ 55ರಿಂದ 60 ರೂ ಇದೆ. ಗೋಧಿ ಹಿಟ್ಟು 45-50 ರೂ, ಕಡಲೆಬೇಳೆ 90-100 ರೂ, ಹೆಸರು ಬೇಳೆ 120-130 ರೂ ಇದೆ. ಸರ್ಕಾರದ ಸಬ್ಸಿಡಿಯಲ್ಲಿ ಅಕ್ಕಿ 34 ರೂ, ಗೋಧಿಹಿಟ್ಟು 30 ರೂ, ಕಡಲೆಬೇಳೆ 70 ರೂ, ಮತ್ತು ಹೆಸರುಬೇಳೆ 107 ರೂಗೆ ಮಾರಾಟವಾಗಲಿದೆ.