ಉಡುಪಿ :ಅಕ್ಟೋಬರ್ 31: ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿರುವ ಪ್ರಕರಣದ 10 ಮಂದಿ ಬಾಂಗ್ಲಾ ವಲಸಿಗರ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಿ ಉಡುಪಿ ನ್ಯಾಯಾಲಯ ಬುಧವಾರ ಆದೇಶಿಸಿದೆ.
ಉಡುಪಿಯ ಹೂಡೆ, ಸಂತೆಕಟ್ಟೆ, ಕಾರ್ಕಳದ ಮಾಳದಲ್ಲಿ ಬಂಧಿಸಲ್ಪಟ್ಟ 10 ಮಂದಿ ಆರೋಪಿಗಳನ್ನು ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಉಡುಪಿಯ ಪ್ರಧಾನ ಎರಡನೇ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ನ್ಯಾಯಾಧೀಶ ಯೋಗೀಶ್ ಅವರು ಎಲ್ಲ 10 ಮಂದಿ ಆರೋಪಿಗಳಿಗೆ ನ.15ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದರು.
ಬಂಧಿತ 10 ಮಂದಿ ಆರೋಪಿಗಳಿಗೆ ಜಾಮೀನು ನೀಡುವಂತೆ ಕೋರಿ ಆರೋಪಿಗಳ ಪರ ವಕೀಲ ಅಸಾದುಲ್ಲಾ ಕಟಪಾಡಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯ ವಾದ ಪ್ರತಿವಾದ ನಡೆದ ಬಳಿಕ ಅಂತಿಮ ಆದೇಶವನ್ನು ನ.5ಕ್ಕೆ ನಿಗದಿ ಪಡಿಸಿ ನ್ಯಾಯಾಲಯ ಆದೇಶ ನೀಡಿದೆ.