ಕುಂದಾಪುರ:ಅಕ್ಟೋಬರ್ 31:ಮಣ್ಣು ತುಂಬಿದ ಮಿನಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಇದೆ ವೇಳೆ ಎದುರಿನಿಂದ ಸ್ಕೂಟಿ ಚಲಾಯಿಸಿಕೊಂಡು ಬರುತ್ತಿದ್ದ ಮಹಿಳೆಯು ವಾಹನ ಸಹಿತ ಲಾರಿಯಿಂದ ಬಿದ್ದ ಮಣ್ಣಿನಡಿ ಸಿಲುಕಿಕೊಂಡ ಘಟನೆ ಕಿರಿಮಂಜೇಶ್ವರ ಗ್ರಾಮದ ನಾಗೂರು – ಉಪ್ಪಳ್ಳಿ ರಸ್ತೆಯಲ್ಲಿನ ತಿರುವಿನಲ್ಲಿ ಬುಧವಾರ ನಡೆದಿದೆ.
ಬುಧವಾರ ಮಧ್ಯಾಹ್ನ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಗೂರು ಉಪ್ರಳ್ಳಿ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಇಲ್ಲಿನ ಒಳ ರಸ್ತೆಯ ತಿರುವಿನಲ್ಲಿ ಮಣ್ಣು ತುಂಬಿದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಒಂದು ಬದಿಗೆ ವಾಲಿ ಮಗುಚಿ ಬಿದ್ದಿತ್ತು. ಅದೇ ಸಂದರ್ಭದಲ್ಲಿ ಲಾರಿಯ ಪಕ್ಕದಲ್ಲೇ ಯುವತಿ ಚಲಾಯಿಸುತ್ತಿದ್ದ ಸ್ಕೂಟಿ ಮೇಲೆ ಟಿಪ್ಪರ್ ಮಗುಚಿ ಬಿದ್ದು, ಮಣ್ಣಿನ ಅಡಿಯಲ್ಲಿ ಸ್ಕೂಟಿ ಸಮೇತ ಸವಾರೆ, ಸ್ಥಳೀಯ ನಿವಾಸಿ ಆರತಿ ಶೆಟ್ಟಿ ಸಿಲುಕಿಕೊಂಡರು. ಲಾರಿ ಚಾಲಕನಿಗೆ ಹೊರಬರಲು ಸಾಧ್ಯವಾಗದೆ ಕ್ಯಾಬಿನ್ ಒಳಗಡೆಯೇ ಸಿಲುಕಿಕೊಂಡಿದ್ದರು. ಈ ಸಂದರ್ಭ ಅದೇ ದಾರಿಯಾಗಿ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದ ಸಮಾಜಸೇವಕ ಕೋಡಿ ಅಶೋಕ್ ಪೂಜಾರಿ ಅವರ ಕಣ್ಣೆದುರೇ ಘಟನೆ ನಡೆದಿದ್ದು, ಏನು ಮಾಡಬೇಕೆಂದು ತೋಚದೇ ಸಹಾಯಕ್ಕಾಗಿ ಕೂಗಿಕೊಂಡರು. ಯಾರ ಸುಳಿವೂ ಕಾಣದಾಗ ಮಣ್ಣಿನಲ್ಲಿ ಮುಖ ಸಂಪೂರ್ಣ ಮುಚ್ಚಿ ಹೋಗಿದ್ದ ಮಹಿಳೆಯನ್ನು ಕೈಗಳಿಂದಲೇ ಮಣ್ಣನ್ನು ಅಗೆದು ತೆಗೆದು ಯುವತಿಯ ತಲೆಯನ್ನು ಮಣ್ಣಿನಿಂದ ಮೊದಲು ಮೇಲಕ್ಕೆತ್ತಿದರು.ಅನಂತರ ಬಂದ ಸ್ಥಳೀಯರ ಸಹಕಾರದಿಂದ ಲಾರಿಯ ಮಣ್ಣಿನಡಿಯಿಂದ ಮಹಿಳೆಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಕಳುಹಿಸಲಾಯಿತು. ಬಳಿಕ ಸ್ಕೂಟಿಯನ್ನು ತೆರವುಗೊಳಿಸಲಾಯಿತು. ಅಶೋಕ್ ಅವರ ಸಕಾಲಿಕ ನೆರವು ಯುವತಿಯ ಪ್ರಾಣ ಉಳಿಸಿದೆ. ಅಶೋಕ್ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.