ಉಡುಪಿ :ಅಕ್ಟೋಬರ್ 30:ಉಡುಪಿ ಸಂಸದರಾದ ಮಾನ್ಯ ಶ್ರೀ ಕೋಟ ಶ್ರೀನಿವಾಸ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಇಂದು ಅಕ್ಟೋಬರ್ 30, ಬುಧವಾರ,2024 ಬೆಳಿಗ್ಗೆ 10:30 ಗಂಟೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಉಡುಪಿ ಜಿಲ್ಲೆಯ ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕಾರ್ಯ ಪ್ರಗತಿಯ ಬಗ್ಗೆ ಸಮಲೋಚನಾ ಸಭೆ ನಡೆಯಿತು.
ಸಭೆಯಲ್ಲಿ ಮಾನ್ಯ ಕುಂದಾಪುರ ಶಾಸಕರಾದ ಶ್ರೀ ಕಿರಣ್ ಕೊಡ್ಗಿ, ಉಡುಪಿ ಶಾಸಕರಾದ ಶ್ರೀ ಯಶಪಾಲಸುವರ್ಣ,ಕಾಪು ಶಾಸಕರಾದ ಮಾನ್ಯ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಮಾನ್ಯ ಜಿಲ್ಲಾಧಿಕಾರಿಯವರಾದ ಶ್ರೀಮತಿ ವಿದ್ಯಾ ಕುಮಾರಿ, ಮಾನ್ಯ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಅರುಣ್ ಮತ್ತು ಸಂಬಂಧಪಟ್ಟ ಹೆದ್ದಾರಿ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಸಂತೆಕಟ್ಟೆ ಅಂಡರ್ ಪಾಸ್, ಇಂದ್ರಾಳಿ ರೈಲ್ವೆ ಸೇತುವೆ, ರಾಹೆ 169 ಎ ಮಲ್ಪೆ ಹೆಬ್ರಿ ಆಗುಂಬೆ ರಾಷ್ಟ್ರೀಯ ಹೆದ್ದಾರಿ, ಸಾಸ್ತಾನ ಟೋಲ್ ಗೇಟ್, ಸರ್ವಿಸ್ ರಸ್ತೆ ಕಾಮಗಾರಿ, ಅಂಬಲಪಾಡಿ ಮತ್ತು ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಮೇಲ್ ಸೇತುವೆ ನಿರ್ಮಾಣ ಕಾಮಗಾರಿ ಬಗ್ಗೆ ಆರಂಭಿಕವಾಗಿ ವಿಸ್ತೃತವಾದ ಚರ್ಚೆ ನಡೆಯಿತು.
ಕೊನೆಯಲ್ಲಿ ರಾ.ಹೆ .169 ಸಾಣೂರು ಬಿಕನರ್ನ ಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಉಡುಪಿ ಜಿಲ್ಲೆ ,ಕಾರ್ಕಳ ತಾಲೂಕು ಸಾಣೂರು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಮಾನ್ಯ ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿಯವರು *ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಸಾಣೂರು ನರಸಿಂಹ ಕಾಮತ್ ರವರಿಗೆ, ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.
ತುರ್ತಾಗಿ ಆಗಬೇಕಾಗಿರುವ ಸಾಣೂರು ಯುವಕ ಮಂಡಲದ ಮೈದಾನದ ಬಳಿಯ ಹೈ ಟೆನ್ಶನ್ ಟವರ್ ಸಮೀಪ ಗುಡ್ಡ ಜರಿದಿರುವ ಭಾಗಕ್ಕೆ ತಡೆಗೋಡೆ ಕಾಮಗಾರಿ ಯನ್ನು ಇನ್ನೂ ಪ್ರಾರಂಭಿಸದೇ ಇರುವ ಬಗ್ಗೆ ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿದರು.
ಈ ಬಗ್ಗೆ ಸ್ಪಷ್ಟಿಕರಣ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಶ್ರೀ ಮೊಹಮ್ಮದ್ ಅಜ್ಮಿಯವರು, ಕಳೆದ ಮೂರು ತಿಂಗಳಿನಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ, ಇದೀಗ ಕಳೆದ ಒಂದು ವಾರದಿಂದ ಮಳೆ ಬಾರದೆ ಇರುವ ಕಾರಣ ಕಾಮಗಾರಿಯನ್ನು ತುರ್ತಾಗಿ ಪ್ರಾರಂಭಿಸಿ 20 ದಿನಗಳ ಒಳಗಾಗಿ ತಡೆಗೋಡೆ ನಿರ್ಮಾಣ ಕಾರ್ಯವನ್ನು ಆದ್ಯತೆಯ* ಮೇರೆಗೆ ಮುಗಿಸಿಕೊಡುವುದಾಗಿ ಭರವಸೆ ನೀಡಿದರು.
ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿರುವ ನಾಲ್ಕು ಪ್ರಯಾಣಿಕರ ತಂಗುದಾಣಗಳನ್ನು ಹೆದ್ದಾರಿ ಇಲಾಖೆಯವರು ತೆರವುಗೊಳಿಸಿದ್ದು, ಪ್ರಯಾಣಿಕರು ಬಸ್ಸಿಗಾಗಿ ಬಿಸಿಲು ಮಳೆಗಾಳಿಗೆ ರಸ್ತೆಯ ಮಧ್ಯದಲ್ಲಿ ಕಾಯಬೇಕಾದ ದಯನೀಯ ಪರಿಸ್ಥಿತಿಯ ಬಗ್ಗೆ ಗಮನ ಸೆಳೆದು, ಕನಿಷ್ಠಪಕ್ಷ ತಾತ್ಕಾಲಿಕ ತಂಗುಧಾನದ ನಿರ್ಮಾಣ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಈಗಾಗಲೇ ಸಾಣೂರಿನ ರಿಕ್ಷಾ ಮಾಲಕ ಮತ್ತು ಚಾಲಕರು ನೆರಳ ಬಲೆ ಮತ್ತು ಮರದ ಕಂಬಗಳನ್ನು ಬಳಸಿ, ಪ್ರಯಾಣಿಕರ ಅನುಕೂಲಕ್ಕಾಗಿ ಶ್ರಮದಾನದ ಮೂಲಕ ತಾತ್ಕಾಲಿಕ ಬಸ್ಸು ತಂಗುದಾಣವನ್ನು ನಿರ್ಮಾಣ ಮಾಡಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು.
ಹೊಸ ತಂಗುದಾಣಗಳನ್ನು ಮಾಡಲು ಈಗಾಗಲೇ ವಿನ್ಯಾಸವನ್ನು ರಚಿಸಲಾಗಿದ್ದು ಹೆದ್ದಾರಿ ಕಾಮಗಾರಿ ಸಂಪೂರ್ಣವಾದ ಬಳಿಕ ಮೇ (2025) ತಿಂಗಳಿನಲ್ಲಿ ಪ್ರಯಾಣಿಕರ ತಂಗುದಾಣದ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವುದಾಗಿ ಹೆದ್ದಾರಿ ಅಧಿಕಾರಿಯವರು ತಿಳಿಸಿದರು.
ಸಾಣೂರು ಪುಲ್ಕೇರಿ ಬೈಪಾಸ್ ವೃತ್ತದ ಬಳಿ ಇಂದಿರಾನಗರಕ್ಕೆ ಹೋಗುವ ರಸ್ತೆಯ ಪರಿಸರದಲ್ಲಿ ಕಟ್ಟಡವನ್ನು ಕೆಡವಿದ ಮಣ್ಣು ತುಂಬಿ ಹೋಗಿದ್ದು, ಇಂದಿರಾ ನಗರ ರಸ್ತೆಯ ಆರಂಭದಲ್ಲಿ ತಾತ್ಕಾಲಿಕವಾಗಿ ಮೋರಿ ಪೈಪ್ ಹಾಕಲಾಗಿದ್ದು, ಕಳೆದ ವಾರ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಶಾಲಾ ವಾಹನ ಹೊಂಡಕ್ಕೆ ಬಿದ್ದು ಅದೃಷ್ಟವಶಾತ್ ಜೀವಾಪಾಯದಿಂದ ಪಾರಾಗಿರುವ ಬಗ್ಗೆ ಸಭೆಯ ಗಮನಕ್ಕೆ ತರಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಅರುಣ್ ರವರು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಒಂದು ವಾರದ ಒಳಗಾಗಿ ಇಂದಿರಾ ನಗರ ಅಡ್ಡರಸ್ತೆಗೆ ಹೋಗುವ ಪ್ರದೇಶದ ಕಾಮಗಾರಿಯನ್ನು ಸುರಕ್ಷಿತವಾಗಿ ನಡೆಸಿಕೊಡುವಂತೆ ಆದೇಶ ನೀಡಿದರು.
ಸಾಣೂರು ಬೈಪಾಸ್ ಸರ್ಕಲ್ ನಿಂದ ಅವಿನಾಶ ನಿವಾಸದ ವರೆಗೆ ಹಾಗೂ ಸಾಣೂರು ಮಾರಿಗುಡಿಯಿಂದ ಸಾಣೂರು ಯುವಕ ಮಂಡಲದ ವರೆಗೆ ಸುಮಾರು 1.6 ಕಿಲೋಮೀಟರ್ ಹೆದ್ದಾರಿಯ ಎರಡು ಬದಿ ಸರ್ವಿಸ್ ರಸ್ತೆ* ನಿರ್ಮಾಣ ಮಾಡುವ ಬಗ್ಗೆ ಕಳೆದೆರಡು ವರ್ಷಗಳಿಂದ ಮಾನ್ಯ ಶಾಸಕರಿಗೆ ಜಿಲ್ಲಾಧಿಕಾರಿಯವರಿಗೆ ಹಾಗೂ ಸಂಸದರಿಗೆ ಮನವಿಯನ್ನು ಸಲ್ಲಿಸಿದ್ದರು ಈ ಬಗ್ಗೆ ಇನ್ನೂ ಪ್ರಸ್ತಾವನೆ ಸಲ್ಲಿಸಿದರುವ ಬಗ್ಗೆ ಸಾಣೂರು ನರಸಿಂಹ ಕಾಮತ್ ರವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ದರು.
ಈಗಾಗಲೇ ಪ್ರಸ್ತಾವಿತ ರಾಷ್ಟ್ರೀಯ ಹೆದ್ದಾರಿಯ ಅಂದಾಜು ವೆಚ್ಚ ಬಹಳಷ್ಟು ಹೆಚ್ಚಾಗಿದ್ದು, ಸರ್ವಿಸ್ ರಸ್ತೆಯನ್ನು ಕಾಮಗಾರಿಯಲ್ಲಿ ಕೈಬಿಟ್ಟಿರುವುದಾಗಿ ತಿಳಿಸಿದರು.
ರಸ್ತೆ ಸುರಕ್ಷತೆಯ ದೃಷ್ಟಿಯಿಂದ, ಗ್ರಾಮದ ವಿವಿಧ ಅಡ್ಡ ರಸ್ತೆಗಳಿಂದ ಜನರು ತಮ್ಮ ವಾಹನದ ಮೂಲಕ ನೇರವಾಗಿ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುವುದರಿಂದ ಈಗಾಗಲೇ ಹಲವಾರು ಅಪಘಾತಗಳು ನಡೆದಿರುವ* ಬಗ್ಗೆ ಮಾನ್ಯ ಪೊಲೀಸ ವರಿಷ್ಠಾಧಿಕಾರಿಯವರಿಗೆ ಸಾಣೂರು ನರಸಿಂಹ ಕಾಮತ್ ರವರು ವಿವರಗಳನ್ನು ನೀಡಿದರು.
ಸುರಕ್ಷತಾ ದೃಷ್ಟಿಯಿಂದ ಈ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಕಲೆಹಾಕಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸುವುದಾಗಿ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿಯವರು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 12 ಸಂಪರ್ಕ ಅಡ್ಡರಸ್ತೆಗಳಿಗೆ, ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬದಿಯಿಂದ ಕನಿಷ್ಠ 50 ಮೀಟರ್ ಡಾಮರೀಕರಣ ಮಾಡಿ ಕೊಡಬೇಕೆಂದು ಸಾಣೂರು ನರಸಿಂಹ ಕಾಮತ್ ರವರು ಅಗ್ರಹಿಸಿದರು.
ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ಸಾಣೂರು ಗ್ರಾಮ ಪಂಚಾಯತ್ ವತಿಯಿಂದ ಡಾಮರೀಕರಣ ಮತ್ತು ಕಾಂಕ್ರೀಟೀಕರಣಗೊಳಿಸಿದ ರಸ್ತೆಗಳನ್ನು ಅಗೆದು ಅಗಲೀಕರಣ ಮಾಡಿರುವುದರಿಂದ, ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಮಾಡಿಕೊಡಬೇಕಾಗಿರುವುದು ಕಡ್ಡಾಯ ಹೊಣೆಗಾರಿಕೆ ಎಂದು ಸಭೆಗೆ ತಿಳಿಸಿದರು.
ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಂಸದರು ಹೆದ್ದಾರಿ ಇಲಾಖೆ ಸೂಚಿಸಿದರು.
ಆರು ತಿಂಗಳ ಒಳಗಾಗಿ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 4.5 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಸಂಪೂರ್ಣಗೊಳಿಸಿದ ಬಳಿಕ ಹೊಸ ಪ್ರಯಾಣಿಕರ ತಂಗುದಾಣ
ಹಾಗೂ ಬೀದಿ ದೀಪ ವ್ಯವಸ್ಥೆಗಳನ್ನು ಕಲ್ಪಿಸುವುದಾಗಿ ಯೋಜನಾಧಿಕಾರಿಯವರು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಬೆಳುವಾಯಿ ಶ್ರೀ ರತ್ನಾಕರ ಶೆಟ್ಟಿಯವರು ಉಪಸ್ಥಿತರಿದ್ದರು.