ಕುಂದಾಪುರ :ಅಕ್ಟೋಬರ್ 29:ಕುಂದಾಪುರದ ಕರ್ನಾಟಕ ಬ್ಯಾಂಕ್ ಕೋಣಿ ಶಾಖೆಯಲ್ಲಿ ನ. 16 ರಂದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಕಾನೂನು ಸಂಘರ್ಷಕ್ಕೊಳಪಟ್ಟ ಬಾಲಕ ಸಹಿತ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಇಂದ್ರನಗರ ನಿವಾಸಿ ಮೊಹಮ್ಮದ್ ಹುಸೇನ್ (22) ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಬೈಕನ್ನು ಪೊಲೀಸರು ವಶಪಡಿಸಿದ್ದಾರೆ.
ಅ. 16ರ ಮಧ್ಯರಾತ್ರಿ 2.45ರ ಸುಮಾರಿಗೆ ಕೋಣಿಯ ಬ್ಯಾಂಕಿನ ಎಟಿಎಂಗೆ ನುಗ್ಗಿ ಯಂತ್ರ ತೆರೆಯಲು ಯತ್ನಿಸುತ್ತಿರುವಾಗ ಹೈದರಾಬಾದ್‌ನ ಸೆಕ್ಯೂರಿಟಿ ಸಂಸ್ಥೆಯವರು ಎಚ್ಚರಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದು, ಅಷ್ಟರಲ್ಲಿ ಕಳ್ಳರು ಬರಿಗೈಯಲ್ಲಿ ವಾಪಾಸು ಹೋಗಿರುವುದಾಗಿದೆ.
ಎಟಿಎಂ ನಿರ್ವಹಿಸುವ ಸಂಸ್ಥೆಯ ಭದ್ರತಾ ನಿಗಾ ವಹಿಸುವವರು ಹೈದರಾಬಾದಿನಲ್ಲಿ ಸಿಸಿ ಟಿವಿ ಮಾನಿಟರಿಂಗ್ ಮಾಡುತ್ತಿದ್ದು, ಅವರ ಗಮನಕ್ಕೆ ಬಂದ ತತ್‌ಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ರಾತ್ರಿಯೇ ಎಸ್‌ಐ ಹಾಗೂ ಪೊಲೀಸ್ ತಂಡ ಸ್ಥಳಕ್ಕೆ ನೀಡಿದ್ದು, ಅಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆ.
ಕುಂದಾಪುರ ವೃತ್ತ ನಿರೀಕ್ಷಕ ನಂಜಪ್ಪ ಎನ್., ಎಸ್‌ಐಗಳಾದ ವಿನಯ್ ಎಂ. ಕೊರ್ಲಹಳ್ಳಿ, ಪುಷ್ಪಾ, ಸಿಬಂದಿ ಮೋಹನ, ಸಂತೋಷ, ಅವಿನಾಶ, ಶ್ರೀಧರ, ಘನಶ್ಯಾಮ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಈ ಆರೋಪಿತರು ಕುಂದಾಪುರ ಠಾಣೆ ಮಾತ್ರವಲ್ಲದೆ, ಇದಕ್ಕೂ ಹಿಂದೆ ಬೆಳ್ತಂಗಡಿ ಠಾಣೆ, ಪಡುಬಿದ್ರಿ ಠಾಣೆ, ಬಳ್ಳಾರಿ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಬ್ಯಾಂಕ್ ಕಳ್ಳತನ, ಬೈಕ್ ಕಳ್ಳತನ, ಅಂಗಡಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.