ಬೆಂಗಳೂರು :ಅಕ್ಟೋಬರ್ 28: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ಧ, ವಾಯು ಮಾಲಿನ್ಯ ನಿಯಂತ್ರಣದಲ್ಲಿಡಲು ಹಾಗೂ ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯ ಸಂರಕ್ಷಣೆಯ ಹಿತದೃಷ್ಠಿಯಿಂದ ಭಾರತ ಸರ್ಕಾರದ ಪರಿಸರ (ಸಂರಕ್ಷಣಾ) ನಿಯಮಾವಳಿ 1986 ತಿದ್ದುಪಡಿ 1999 ಮತ್ತು 2000 ಅಡಿಯಲ್ಲಿ ನಿಗಧಿಪಡಿಸಿರುವ ಮಾನಕಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ಕೆಳಕಂಡ ಕ್ರಮಗಳನ್ನು ಸಾರ್ವಜನಿಕರು ಅನುಸರಿಸಲು ರಾಜ್ಯ ಸರ್ಕಾರ ಕೋರಲಾಗಿದೆ.
ಸರ್ವೋಚ್ಚ ನ್ಯಾಯಾಲಯವು ನೀಡಿದ ನಿರ್ದೇಶನದಲ್ಲಿ ಅನುಮತಿಸಿರುವ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಇತರ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿರುತ್ತದೆ. ಪಟಾಕಿ ಮಾರಾಟ ಮಾಡುವವರು ಹಾಗೂ ಪಟಾಕಿ ಸಂಗ್ರಹಿಸುವ ಗೋದಾಮುಗಳನ್ನು ಸಂಬಂಧ ಪಟ್ಟ ಎಲ್ಲಾ ಇಲಾಖೆಯ ಅನುಮತಿ ಪಡೆಯಬೇಕು. ಸುಪ್ರೀಂ ಕೋರ್ಟ್ ಈಗಾಗಲೇ ಹೇಳಿದೆ. ಕೇವಲ ಹಸಿರು ಪಟಾಕಿ ಮಾತ್ರ ಸಿಡಿಸಬೇಕು ಇದರಿಂದ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಈ ಒಂದು ಆದೇಶ ನೀಡಿದೆ. ಹಾಗಾಗಿ ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಹಸಿರು ಪಟಾಕಿ ಸಿಡಿಸಲು ಅವಕಾಶವಿದೆ
25 ಡೆಸಿಬಲ್‍ಗಳಿಗಿಂತ ಹೆಚ್ಚು ಶಬ್ಧ ಉಂಟುಮಾಡುವ ಪಟಾಕಿಗಳ ದಾಸ್ತಾನು, ಮಾರಾಟ ಹಾಗೂ ಉಪಯೋಗಿಸುವುದನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ.
ಹಸಿರು ನ್ಯಾಯ ಪೀಠ, ನವದೆಹಲಿ ರವರ ಆದೇಶದಂತೆ ಎಲ್ಲಾ ಹಸಿರು ಪಟಾಕಿಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಹಾಗೂ ಕ್ಯೂ.ಆರ್ ಕೋಡ್ ಇರುವ ಹಸಿರು ಪಟಾಕಿ (ಕಡಿಮೆ ಮಾಲಿನ್ಯ ಉಂಟುಮಾಡುವ) ಗಳನ್ನು ಮಾತ್ರ ಮಾರಾಟ ಮಾಡುವುದು.
ದಿನದ ಯಾವುದೇ ಸಮಯದಲ್ಲಿ ನಿಶಬ್ಧವಲಯಗಳೆಂದು ಘೋಷಿಸಲ್ಪಟ್ಟಿರುವ ಸ್ಥಳಗಳಲ್ಲಿ (ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ, ವೃದ್ಧಾಶ್ರಮ ಇತ್ಯಾದಿಗಳು) ಸುತ್ತಮುತ್ತ ಯಾವುದೇ ರೀತಿಯ ಶಬ್ದ ಉಂಟುಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳ ಬಳಕೆಯನ್ನು ನಿಷೇಧಿಸಲಾಗಿದೆ.
ಈ ಯಾವುದೇ ಕ್ರಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ, ಅದಕ್ಕೆ ಕಾರಣರಾದವರ ಮೇಲೆ ಕಾಯ್ದೆಯನುಸಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗುವುದು. ಆದ್ದರಿಂದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ಧ ಹಾಗೂ ವಾಯು ಮಾಲಿನ್ಯ ನಿಯಂತ್ರಣದಲ್ಲಿಟ್ಟು ಹಬ್ಬವನ್ನು “ಹಸಿರು ದೀಪಾವಳಿ-ಸ್ವಸ್ಥ ದೀಪಾವಳಿ: ಪರಿಸರ ಸ್ನೇಹಿ ದೀಪಾವಳಿ” ಯನ್ನಾಗಿ ಆಚರಿಸಲು ಸಾರ್ವಜನಿಕರು ಸಹಕರಿಸುವಂತೆ ರಾಜ್ಯ ಸರ್ಕಾರ ಕೋರಿದೆ.