ಉಡುಪಿ, ಅಕ್ಟೋಬರ್ .26: ಜಿಲ್ಲೆಯಲ್ಲಿ ಕ್ವಿಂಟಲ್ ಗೆ 3,000ರೂ. ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯದಿರುವುದನ್ನು ಖಂಡಿಸಿ ಉಡುಪಿ ಜಿಲ್ಲಾ ಕೃಷಿಕ ಸಂಘದ ನೇತೃತ್ವದಲ್ಲಿ ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸ್ಥಳದಲ್ಲಿ ಕಿಲೋ ಒಂದಕ್ಕೆ 60ರೂ. ದರದಲ್ಲಿ ತಲಾ 2 ಕೆ.ಜಿ. ಸಾವಯವ ಅಕ್ಕಿಯನ್ನು ಮಾರಾಟ ಮಾಡಲಾಯಿತು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸುವಂತೆ ಪ್ರತಿಭಟನಕಾರರು ಪಟ್ಟು ಹಿಡಿದರು. ಅಪರ ಜಿಲ್ಲಾಧಿಕಾರಿ ಯನ್ನು ಕಳುಹಿಸಿ ಕೊಡುವುದಕ್ಕೆ ಆಕ್ಷೇಪಿಸಿದ ರೈತರು, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಮುಂದಾದರು
ಆಗ ಪೊಲೀಸರು ಪ್ರವೇಶ ದ್ವಾರದಲ್ಲೇ ತಡೆದು ಜಿಲ್ಲಾಧಿಕಾರಿಯನ್ನು ಕರೆಸು ವುದಾಗಿ ಮನವಿ ಮಾಡಿದರು. ಬಳಿಕ ಹೊರಗಡೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು.