ಬೆಂಗಳೂರು :ಅಕ್ಟೋಬರ್ 24: ಅರಮನೆ ಮೈದಾನದಲ್ಲಿ ಅಕ್ಟೋಬರ್ 26ರಂದು ಕಂಬಳ (ಕೋಣಗಳ ಓಟ) ಸ್ಪರ್ಧೆ ನಡೆಸುತ್ತಿಲ್ಲ ಎಂಬುದಾಗಿ ಬೆಂಗಳೂರು ಕಂಬಳ ಸಮಿತಿಯು ಹೈಕೋರ್ಟ್‌ಗೆ ಮಾಹಿತಿ ನೀಡಿದೆ.ಬೆಂಗಳೂರು ಕಂಬಳ ಸಮಿತಿಗೆ ಸ್ಪರ್ಧೆ ಆಯೋಜಿಸಲು ಅನುಮತಿ ನೀಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಪ್ರಾಣಿಗಳ ಹಿಂಸೆ ತಡೆಯಲು ಶ್ರಮಿಸುತ್ತಿರುವ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಅನಿಮಲ್ಸ್ (ಪೆಟಾ) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ವೇಳೆ, ಮುಖ್ಯ ನ್ಯಾಯಮೂರ್ತಿ ಎನ್. ವಿ ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ, ಕಂಬಳ ಸಮಿತಿ ಪರ ವಕೀಲರು ಮಾಹಿತಿ ನೀಡಿದರು.ಅಲ್ಲದೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿ, ಬೇರೆ ಕಡೆ ಕಂಬಳ ಆಯೋಜನೆಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರಕ್ಕೆ ಅನುಮತಿ ಕೋರಿಲ್ಲ ಎಂದು ತಿಳಿಸಿದರು.
ಈ ಅಂಶವನ್ನು ದಾಖಲಿಸಿಕೊಂಡ ಪೀಠ, ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿತು.ಪೆಟಾ ಪರ ವಕೀಲರು, ”ಕಂಬಳ ಸ್ಪರ್ಧೆ ನಡೆಸುವಾಗ ಅನುಮತಿ ನೀಡಲಾಗುತ್ತಿದೆ ಎಂಬ ವಿಚಾರವನ್ನು ನಮಗೆ ತಿಳಿಸಬೇಕು. ಆಗ ನಾವು ನ್ಯಾಯಾಲಯದ ಮುಂದೆ ಬರುತ್ತೇವೆ. ನವೆಂಬರ್ 9ರಂದು ದಕ್ಷಿಣ ಕನ್ನಡ ಪಿಲಿಕುಳದ ಪ್ರಾಣಿ ಸಂಗ್ರಹಾಲಯದ ಪಕ್ಕದಲ್ಲಿ ಕಂಬಳ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದೆ ಎನ್ನಲಾಗಿದೆ.
ಈ ಸಂಬಂಧ ಪ್ರಾಣಿ ಸಂಗ್ರಹಾಲಯದ ನಿರ್ದೇಶಕರು ಜಿಲ್ಲಾಧಿಕಾರಿಗೆ ಪತ್ರ ಬರೆದು ಸ್ಪರ್ಧೆಯ ಸಂದರ್ಭದಲ್ಲಿನ ಕೂಗಾಟದಿಂದ ಪ್ರಾಣಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ. ಈ ಸಂಬಂಧ ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸಲಾಗಿದೆ” ಎಂದು ಪೀಠಕ್ಕೆ ವಿವರಿಸಿದರು.