ಬೈಂದೂರು :ಅಕ್ಟೋಬರ್ 23: ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ಬೈಂದೂರಿನ ಗ್ರಾಮೀಣ ಕಲೆ, ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಹೂಡಿಕೆದಾರರನ್ನು ಸೆಳೆದು ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಸೃಷ್ಟಿಸುವ ಉದ್ದೇಶದಿಂದ ನವೆಂಬರ್ 1ರಿಂದ 3ರವರೆಗೆ ನಡೆಯುವ ‘ಬೈಂದೂರು ಉತ್ಸವದಲ್ಲಿ ಸೋಮೇಶ್ವರ ಪಡುವರಿ ಬೀಚ್‌ನಲ್ಲಿ ‘ಬೀಚ್ ಉತ್ಸವ’ ನಡೆಯಲಿದೆ.
ಬೀಚ್ ಉತ್ಸವದಲ್ಲಿ ಸ್ಪೀಡ್ ಬೋಟ್, ಬನಾನ ರೈಡ್, ಪ್ಲೇ ಬೋರ್ಡ್, ಸೈಕಲ್ ಪೆಡ್ಲಿಂಗ್, ಪ್ಲೇ ಜೆಟ್ ಹಾಗೂ ವಿವಿಧ ಮನರಂಜನೆ ಕ್ರೀಡೆಗಳು ಜರುಗಲಿವೆ.
ನ. 1ರಂದು ಕನ್ನಡ ರಥೋತ್ಸವದೊಂದಿಗೆ 28 ಇಲಾಖೆಗಳ ಹಾಗೂ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ವಿಶೇಷತೆಗಳೊಂದಿಗೆ ಆಕರ್ಷಣೀಯ ಟ್ಯಾಬ್ಲೊ ಹಾಗೂ ವಿವಿಧ ಭಜನಾ ತಂಡಗಳಿಂದ ಭಜನಾ ಕುಣಿತ ಮೆರವಣಿಗೆ ಜರುಗಲಿದೆ. ವಿವಿಧ ಇಲಾಖೆಗಳ ಮಾಹಿತಿ ಕಾರ್ಯಾಗಾರ, ವಿಜ್ಞಾನ ವಸ್ತು ಪ್ರದರ್ಶನ, ಬೈಂದೂರು ಕ್ಷೇತ್ರದ ಧಾರ್ಮಿಕ-ಸಾಮಾಜಿಕ-ಶೈಕ್ಷಣಿಕ ಹಿನ್ನೆಲೆಗಳ ವಿಚಾರಗೋಷ್ಠಿ, ಕವಿಗೋಷ್ಠಿ, ಕಂಬಳ, ನಾಟಕ, ಯಕ್ಷಗಾನ, ಕೃಷಿ ಇಲಾಖೆಗಳ ಮಾಹಿತಿ, ಆಹಾರ ಮೇಳ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.