ಉಡುಪಿ, ಅಕ್ಟೋಬರ್ .21: ಶ್ರೀ ಕೃಷ್ಣ ಮಠದಲ್ಲಿ ಪ್ರಧಾನ ಮಂತ್ರಿ ಸಂಸದೀಯ ಅಧೀನ ಕಾರ್ಯದರ್ಶಿ ಎಂದು ನಂಬಿಸಿ ವಿಶೇಷ ಆತಿಥ್ಯ ಸ್ವೀಕರಿಸಿದ್ದ ಆರೋಪಿಗೆ ಉಡುಪಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರುಗೊಳಿಸಿ ಆದೇಶ ನೀಡಿದೆ
ಘಟನೆ ಯ ವಿವರ
ಆರೋಪಿ ಉದಯ್ ಕುಮಾರ್ ತಾನು ಪ್ರಧಾನಮಂತ್ರಿ ಕಾರ್ಯಾಲಯದ ಸಂಸದೀಯ ಅಧೀನ ಕಾರ್ಯದರ್ಶಿ ಎಂದು ಶ್ರೀಕೃಷ್ಣಮಠದ ದಿವಾನ ನಾಗರಾಜ್ ಅವರಿಗೆ ಕರೆ ಮಾಡಿ, ತಾವು ಕುಟುಂಬ ಸಮೇತರಾಗಿ ಉಡುಪಿ ಕೃಷ್ಣಮಠದ ದರ್ಶನಕ್ಕೆ ಆಗಮಿಸುತ್ತಿದ್ದೇವೆ. ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಕೋರಿಕೊಂಡಿದ್ದರು. ಅದರಂತೆ ಅ.10ರಂದು ಮಠದಲ್ಲಿ ಅವರಿಗೆ ಎಲ್ಲಾ ವ್ಯವಸ್ಥೆ ಕಲ್ಪಿಸಿ, ವಿಶೇಷ ದರ್ಶನ ಮಾಡಿಸಲಾಗಿತ್ತು
ನಂತರದಲ್ಲಿ ಉದಯ್ ಕುಮಾರ್ ಚಲನವಲನದ ಮೇಲೆ ಸಂಶಯಗೊಂಡ ದಿವಾನರು ಪ್ರಧಾನ ಮಂತ್ರಿ ಕಾರ್ಯಾಲಯದ ವೆಬ್ ಸೈಟ್ ಪರಿಶೀಲಿಸಿದಾಗ ಆತ ಸುಳ್ಳು ಮಾಹಿತಿ ನೀಡಿದ್ದಾಗಿ ತಿಳಿದು, ಸರಕಾರಿ ಅಧಿಕಾರಿ ಎಂಬ ಸೋಗಿನಲ್ಲಿ ಕೃಷ್ಣಮಠಕ್ಕೇ ಬಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆರೋಪಿ ಉದಯ್ ಕುಮಾರ್ ನ್ಯಾಯಾಲಯಕ್ಕೆ ಶರಣಾಗಿದ್ದು,ಇದೀಗ ನ್ಯಾಯಾಲಯ ಆರೋಪಿಗೆ ಷರತ್ತು ಬದ್ಧ ಜಾಮೀನು ನೀಡಿದೆ. ಆರೋಪಿಯ ಪರವಾಗಿ ಉಡುಪಿಯ ನ್ಯಾಯವಾದಿ ಚೇರ್ಕಾಡಿ ಅಖಿಲ್ ಬಿ.ಹೆಗ್ಡೆ ವಾದಿಸಿದ್ದಾರೆ.