ಉಡುಪಿ:ಅಕ್ಟೋಬರ್ 19:ಮಲ್ಪೆ ಬೀಚ್ ನಲ್ಲಿ ಅಕ್ಟೋಬರ್ 18 ರ ಶುಕ್ರವಾರ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿರುವ ಘಟನೆ ನಡೆದಿದೆ. ರಕ್ಷಿಸಲ್ಪಟ್ಟಿರುವ ಮಕ್ಕಳು ಹಾವೇರಿಯವರೆಂದು ತಿಳಿದುಬಂದಿದೆ.
ವಿದ್ಯಾಭ್ಯಾಸ ಮುಂದುವರಿಸುವ ಆಸಕ್ತಿ ಹೊಂದಿದ್ದೇವೆ, ಪೋಷಕರಿಲ್ಲದೆ ಅಸಹಾಯಕರಾದೆವು.ಕಲಿಯುವ ಉದ್ದೇಶಕ್ಕಾಗಿ ಹಣ ಕ್ರೋಢೀಕರಿಸಲು, ಹಾವೇರಿಯಿಂದ ಉಡುಪಿಗೆ ಭಿಕ್ಷೆಯಾಚಿಸಲು ಬಂದಿರುವುದಾಗಿ ಮಕ್ಕಳು ಹೇಳಿಕೊಂಡಿದ್ದಾರೆ.
ಬೀಚ್ ನಲ್ಲಿ ವಿಹರಿಸುತ್ತಿದ್ದ ಇಬ್ಬರು ಬಾಲಕಿಯರ ಚಲನವಲನದಲ್ಲಿ ಸಂಶಯಗೊಂಡು ವಿಚಾರಿಸಿದಾಗ, ಬೀಚ್ ಗಸ್ತು ಸಿಬ್ಬಂದಿ ಸುರೇಶ್ ಅಂಚನ್ ಮತ್ತು ಸುಬ್ರಮಣ್ಯ ಅವರು ಬಾಲಕಿಯರು ಮನೆಬಿಟ್ಟು ಬಂದಿರುವುದು ಗೊತ್ತಾಗಿದೆ. ತಕ್ಷಣ ಅವರು ಅಪ್ರಾಪ್ತ ಬಾಲಕಿಯರ ರಕ್ಷಣೆಗೈಯಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಒಳಕಾಡುವರು ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಕ್ಕಳ ರಕ್ಷಣಾ ಘಟಕಕ್ಕೆ ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ.
ನಂತರ ನಗರ ಮಹಿಳಾ ಪೋಲಿಸ್ ಠಾಣೆಯ ಪಿ.ಎಸ್.ಐ ಪ್ರೇಮನ್ ಗೌಡ ಪಾಟೀಲ್, ಪೇದೆ ಮಹದೇವ್ ಅವರೊಂದಿಗೆ ಒಳಕಾಡು ಅವರು ಬೀಚ್ ಗೆ ಬಂದು ಮಕ್ಕಳನ್ನು ರಕ್ಷಿಸಿದ್ದಾರೆ.
ತರುವಾಯ ಕಲ್ಯಾಣ ಸಮಿತಿಯ ಆದೇಶದಂತೆ ರಕ್ಷಿಸಲ್ಪಟ್ಟ ಅಪ್ರಾಪ್ತ ಮಕ್ಕಳನ್ನು ನಿಟ್ಟೂರಿನ ಬಾಲಕಿಯರ ಬಾಲಭವನದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಈ ಸಂದರ್ಭ ಮಕ್ಕಳ ರಕ್ಷಣಾ ಘಟಕದ ಮಹೇಶ್ ಇದ್ದರು ಎನ್ನಲಾಗಿದೆ