ಉಡುಪಿ :ಜಿಲ್ಲಾ ಮಟ್ಟದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ..!”
ಉಡುಪಿ, ಅಕ್ಟೋಬರ್ 18:ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಉಡುಪಿ ನಗರಸಭೆ ಹಾಗೂ ಪರಿಶಿಷ್ಟ ಪಂಗಡಗಳ ವಿವಿಧ ಸಂಘಟನೆಗಳ ಸಹಯೋಗ ದೊಂದಿಗೆ ನಡೆದ ಜಿಲ್ಲಾ ಮಟ್ಟದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು
ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಕಾರ್ಯಕ್ರಮ ಉದ್ಘಾಟಿಸಿ ಮಹರ್ಷಿ ವಾಲ್ಮೀಕಿ ಅವರ ವೈಚಾರಿಕತೆಯಲ್ಲಿರುವಂತೆ ಪ್ರಾಮಾಣಿಕರಾಗಿ, ಅಕ್ಷರ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಮಾನವೀಯ ನೆಲೆಯಲ್ಲಿ ಸ್ವಾಸ್ಥ್ಯ ಸಮಾಜವನ್ನು ಕಟ್ಟಲು ನಾವೆಲ್ಲರೂ ಬದ್ದರಾಗೋಣ. ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯದಲ್ಲಿರುವ ಸಂದೇಶಗಳು ಇಂದಿಗೂ ಪ್ರಸ್ತುತ ವಾಗಿದ್ದು, ಅದನ್ನು ದೈನಂದಿನ ಜೀವನದಲ್ಲಿ ಪಾಲಿಸೋಣ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಚಿಂತನೆ ಗಳನ್ನು ಕೇವಲ ಅವರ ಜಯಂತಿಯಂದು ಮಾತ್ರ ಸ್ಮರಿಸದೇ ಅದನ್ನುಜೀವನದ ಪ್ರತಿ ಹಂತದಲ್ಲಿಯೂ ಅಳವಡಿಸಿ ಕೊಳ್ಳಬೇಕು ಎಂದರು.
ಉಪನ್ಯಾಸಕ ಚೇತನ್ ಶೆಟ್ಟಿ ಕೋವಾಡಿ ಮಹರ್ಷಿ ವಾಲ್ಮೀಕಿ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು
ರಾಮಾಯಣ ಮಹಾಕಾವ್ಯದ ಶ್ಲೋಕಗಳು ಸಾಮಾಜಿಕ ಮೌಲ್ಯಗಳು, ಆದರ್ಶ ಪರಂಪರೆ, ಮಾನವೀಯ ಮೌಲ್ಯಗಳು, ಮಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮದ ಸಂದೇಶಗಳು ಸದಾ ಕಾಲಕ್ಕೆ ಅನ್ವಯವಾಗುವ ಜೀವನ ಸಂದೇಶಗಳನ್ನು ನೀಡುತ್ತವೆ. ವಾಲ್ಮೀಕಿ ಅವರ ಇಚ್ಚಾಶಕ್ತಿ, ಅದಮ್ಯ ಚೇತನ ಎಲ್ಲರಿಗೂ ಮಾದರಿಯಾಗುವ ಜೊತೆಗೆ ರಾಮಾಯಣದ ಆದರ್ಶ ಮೌಲ್ಯ ಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಂಡು, ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ 2023-24ನೇ ಸಾಲಿನಲ್ಲಿ ಕೊರಗ, ಮರಾಟಿ ನಾಯ್ಕ್ ಹಾಗೂ ಮಲೆಕುಡಿ ಸಮುದಾಯದ ಎಸೆಸೆಲ್ಸಿ ಹಾಗೂ ಪಿಯುಸಿ ಅಂತಿಮ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ಇದೇ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಡಾ.ಕೆ. ಅರುಣ್, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ. ಎಸ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಪರಿಶಿಷ್ಟ ಪಂಗಡಗಳ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಐ.ಟಿ.ಡಿ.ಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ಎಂ. ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಐ.ಟಿ.ಡಿ.ಪಿ ಸಿಬ್ಬಂದಿ ಶ್ರೀದೇವಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಶ್ರೀಮಹರ್ಷಿ ವಾಲ್ಮೀಕಿ ನಾಗರಿಕ ಸಮಾಜದ ಮೊದಲ ಅಕ್ಷರ ಜ್ಞಾನಿ. ಅವರು ತಮ್ಮ ರಾಮಾಯಣದ ಮೂಲಕ ಬಿಂಬಿಸಿದ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಮುಂದಿನ ಪೀಳಿಗೆಗೂ ಮಾದರಿಯಾ ಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದ್ದಾರೆ.