ಮಣಿಪಾಲ ಅಕ್ಟೋಬರ್ 11, 2024 – ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ನ ವಿದ್ಯಾರ್ಥಿ ವ್ಯವಹಾರ ವಿಭಾಗ [ಡಿಪಾರ್ಟ್‌ಮೆಂಟ್ ಆಪ್ ಸ್ಟೂಡೆಂಟ್ ಅಫೇರ್ಸ್] ದ ವತಿಯಿಂದ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಅಕ್ಟೋಬರ್ 10, 2024 ರಂದು ಮಾನಸಿಕ ಸ್ವಾಸ್ಥ್ಯಕ್ಕಾಗಿ ಮ್ಯಾರಥಾನ್ ಯಶಸ್ವಿಯಾಗಿ ಜರಗಿತು. ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಆಶಯದಲ್ಲಿ ಸಂಜೆ 4 ಗಂಟೆಗೆ ಆರಂಭಗೊಂಡ ಮ್ಯಾರಥಾನ್, ಸಾಮಾಜಿಕ ಸ್ವಾಸ್ಥ್ಯಪಾಲನೆಯ ಬಗ್ಗೆ ಮಾಹೆಯ ಬದ್ಧತೆಯನ್ನು ದೃಢಪಡಿಸಿತು. ಮಾಹೆಯ ವಿವಿಧ ವಿಭಾಗಗಳ, ವಿದ್ಯಾರ್ಥಿಗಳು, ಸಿಬಂದಿಗಳು ಸೇರಿದಂತೆ ಸುಮಾರು 1000 ಮಂದಿ ಈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.
ಮ್ಯಾರಥಾನ್‌ಗೆ ಹಸಿರು ನಿಶಾನೆಯೊಂದಿಗೆ ಉದ್ಘಾಟಿಸಿದ, ಮಾಹೆಯ ಕುಲಪತಿಗಳಾದ ಲೆ. ಜ. [ಡಾ] ಎಂ. ಡಿ. ವೆಂಕಟೇಶ್ ಅವರು ಮಾತನಾಡಿ, ಮಾನಸಿಕ ಆರೋಗ್ಯವಿದ್ದರೆ ಮಾತ್ರ ಪೂರ್ಣ ಆರೋಗ್ಯಭಾಗ್ಯ ಲಭ್ಯವಾಗುತ್ತದೆ. ಪ್ರಸ್ತುತ ಈ ಮ್ಯಾರಥಾನ್ ಮಾನಸಿಕ ಸ್ವಾಸ್ಥ್ಯದ ಕುರಿತ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಲಿದೆ.. ಮಾನಸಿಕ ಆರೋಗ್ಯದ ಕುರಿತು ಇರುವ ತಪ್ಪು ತಿಳುವಳಿಕೆಯನ್ನು ಕೂಡ ಇದು ಹೋಗಲಾಡಿಸುತ್ತದೆ’ ಎಂಬ ಆಶಯ ವ್ಯಕ್ತಪಡಿಸಿದರು.
ಮಾಹೆಯ ಆರೋಗ್ಯವಿಜ್ಞಾನಗಳ ವಿಭಾಗದ ಸಹ-ಕುಲಪತಿಗಳಾದ ಡಾ. ಶರತ್ ರಾವ್, ಮುಖ್ಯ ನಿರ್ವಹಣ ಅಧಿಕಾರಿ [ಚೀಫ್ ಆಪರೇಟಿಂಗ್ ಆಫೀಸರ್-ಸಿಒಒ] ಡಾ. ರವಿರಾಜ್ ಎನ್. ಎಸ್., ಕುಲಸಚಿವ [ರಿಜಿಸ್ಟ್ರಾರ್] ಡಾ. ಗಿರಿಧರ್ ಕಿಣಿ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದರು.
ಬೆಲ್-ಒ-ಸಿಲ್ ಕಂಪೆನಿಯು ಈ ಮ್ಯಾರಥಾನ್‌ನ ಪ್ರಾಯೋಜಕರಲ್ಲಿ ಒಂದಾಗಿದ್ದು, ಇದರ ತಾಂತ್ರಿಕ ಮತ್ತು ನಿರ್ವಹಣ ವಿಭಾಗದ ನಿರ್ದೇಶಕ ಅಶೋಕ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಮಾತನಾಡುತ್ತ, ‘ಮಾನಸಿಕ ಸ್ವಾಸ್ಥ್ಯ ಕುರಿತ ಜಾಗೃತಿಯು ಅತ್ಯಂತ ಆವಶ್ಯಕವಾಗಿದೆ. ಮನಸ್ಸು ಸರಿಯಾಗಿದ್ದರೆ ಮಾತ್ರ ದೇಹ ಸರಿಯಾಗುವುದು. ಎಲ್ಲವೂ ಸರಿಯಾಗಿದ್ದರೆ ಆರೋಗ್ಯವಂತನಾಗಲು ಸಾಧ್ಯ. ಆರೋಗ್ಯವಂತ ಮಾತ್ರ ಸ್ವಾಸ್ಥ್ಯಪೂರ್ಣ ಸಮಾಜವನ್ನುರೂಪಿಸಲು ಶಕ್ತನಾಗುತ್ತಾನೆ’ ಎಂದರು.
ಪ್ರಸ್ತುತ ಮ್ಯಾರಥಾನ್‌ಗೆ ಕೊಡುಗೆಗಳನ್ನು ನೀಡಿದ ಬ್ಯಾಂಕ್ ಆಫ್ ಬರೋಡಾದ ಪರವಾಗಿ ವಿದ್ಯಾಧರ ಶೆಟ್ಟಿ ಮತ್ತು ರೋಶನ್ ಕುಮಾರ್, ಕರ್ನಾಟಕ ಬ್ಯಾಂಕಿನ ವಾದಿರಾಜ ಕೆ., ಫೆಡರಲ್ ಬ್ಯಾಂಕಿನ ರಾಜೀವ ವಿ. ಸಿ., ಆ್ಯಕ್ಸಿಸ್ ಬ್ಯಾಂಕಿನ ಬಿ. ಸುರೇಶ್. ಕೆನರಾ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥರಾದ ಶೀಬಾ ಅವರು ಸಕ್ರಿಯವಾಗಿ ಭಾಗವಹಿಸಿದ್ದರು.
ಮಣಿಪಾಲ್ ಪೊಲೀಸ್ ಸ್ಟೇಶನ್‌ನ ಇನ್ಸ್‌ಪೆಕ್ಟರ್ ದೇವರಾಜ್, ಉಡುಪಿಯ ಎ. ವಿ. ಬಾಳಿಗ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಮತ್ತು ಮನಶ್ಯಾಸ್ತ್ರಜ್ಞ ಡಾ. ಪಿ. ವಿ. ಭಂಡಾರಿ ಉಪಸ್ಥಿತರಿದ್ದರು.
ಮಾಹೆಯ ವಿದ್ಯಾರ್ಥಿ ವ್ಯವಹಾರ ವಿಭಾಗದ ನಿರ್ದೇಶಕರಾದ ಡಾ. ಗೀತಾ ಮಯ್ಯ ಸ್ವಾಗತಿಸಿದರು. ಕೆಎಂಸಿ, ಮಣಿಪಾಲದ ಸಹಪ್ರಾಧ್ಯಾಪಕರಾದ ಡಾ. ರೀನಾ ಶೆರೀನ್ ಮತ್ತು ಮಣಿಪಾಲ ಡಿಓಸಿಯ ಸಹಾಯಕ ಪ್ರಾಧ್ಯಾಪಕ ಡಾ. ಎವರಿಲ್ ಜಾಕ್‌ಲಿನ್ ಫೆರ್ನಾಂಡೀಸ್ ಅವರು ಕಾರ್ಯಕ್ರಮ ನಿರ್ವಹಿಸಿದರು.
ಉಡುಪಿಯ ಕಲಾಮಯಂ ತಂಡ, ಕಟಪಾಡಿ ಚೆಂಡೆ ಬಳಗ, ಪರ್ಕಳ ಸಾಂಸ್ಕೃತಿಕ ತಂಡ, ಎಂಸಿಎಚ್‌ಪಿಯ ವಿದ್ಯಾರ್ಥಿಗಳು ಜಾನಪದ ಹಾಡು-ನೃತ್ಯಗಳನ್ನು ನಡೆಸಿಕೊಟ್ಟರು.