ಉಡುಪಿ : ಅಕ್ಟೋಬರ್ 11: ವ್ಯಕ್ತಿಯೊಬ್ಬರು ಅಕ್ಟೋಬರ್ 09ರಂದು ಕರೆ ಮಾಡಿ ತಾನು ಉದಯ್ ಎಂದು ಪರಿಚಯಿಸಿಕೊಂಡು ತಾನು ಪ್ರಧಾನ ಮಂತ್ರಿಗಳ ಕಾರ್ಯಾಲಯದ ಸಂಸದೀಯ ಅಧೀನ ಕಾರ್ಯದರ್ಶಿ ಎಂದು ತಿಳಿಸಿ ಅಕ್ಟೋಬರ್ 09ರಂದು ರಾತ್ರಿ ಉಡುಪಿ ಕೃಷ್ಣ ಮಠಕ್ಕೆ ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದು ಈ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಹೇಳಿದ್ದಾರೆ,ಅಕ್ಟೋಬರ್ 10ರಂದು ಉದಯ್ ಬಿಳಿ ಬಣ್ಣದ ಇನ್ನೋವಾ ಕ್ರಿಸ್ಟಾ ಕಾರ್ ನಂಬ್ರ KA-05-NH-7571 ರಲ್ಲಿ ಕೃಷ್ಣ ಮಠಕ್ಕೆ ಕುಟುಂಬ ಸಮೇತ ಆಗಮಿಸಿರುತ್ತಾರೆ.
ಕಾರಿನ ಮುಂಭಾಗದ ಬೋನೆಟ್ ಮೇಲೆ ಮತ್ತು ಡಿಕ್ಕಿ ಮೇಲೆ ಕೆಂಪು ಅಕ್ಷರದಲ್ಲಿ GOVT OF INDIA ಹಾಗೂ ಹಿಂದಿನ ಗ್ಲಾಸ್ ನ ಮೇಲ್ಭಾಗದ ಬಲಭಾಗದಲ್ಲಿ ARMY ಎಂಬುದಾಗಿ ಬರೆದಿರುತ್ತದೆ. ಕಾರಿನಲ್ಲಿ ಬಂದಂತಹ ಉದಯ್ ಹಾಗೂ ಆತನ ಕುಟುಂಬಸ್ಥರಿಗೆ ಕೇಂದ್ರ ಅಧೀನ ಕಾರ್ಯದರ್ಶಿಗಳಿಗೆ ನೀಡತಕ್ಕ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಿದ್ದು ಅಕ್ಟೋಬರ್ 10 ರಂದು ಬೆಳಿಗ್ಗೆ 9 ಗಂಟೆಗೆ ದೇವರ ವಿಶೇಷ ದರ್ಶನ ಮಾಡಿಸಲಾಗಿತ್ತು
ನಂತರ ಉದಯ್ ರವರ ಚಲನ-ವಲನಗಳ ಬಗ್ಗೆ ಸಂಶಯಗೊಂಡು ಪಿರ್ಯಾದಿದಾರರು ಮತ್ತು ಮಠದ ದಿವಾನರು ವಿಚಾರಣೆ ಮಾಡಿದಾಗ ಯಾವುದೇ ಸಮರ್ಪಕ ಉತ್ತರವನ್ನು ನೀಡದೇ ಇದ್ದುದರಿಂದ ಪ್ರಧಾನಮಂತ್ರಿಗಳ ಕಾರ್ಯಾಲಯ ವೆಬ್ಸೈಟನ್ನು ಪರಿಶೀಲಿಸಿದಾಗ ಉದಯ್ ರವರ ಬಗ್ಗೆ ಯಾವುದೇ ಸಮರ್ಪಕವಾದ ಮಾಹಿತಿಯು ದೊರೆತಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ
ಕೇಂದ್ರ ಸರ್ಕಾರದ ಅಧಿಕಾರಿ ಎಂಬ ಸೋಗಿನಲ್ಲಿ ಮಠಕ್ಕೆ ಬಂದು ನಂಬಿಸಿ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.