ಉಡುಪಿ :ಅಕ್ಟೋಬರ್ 08 :ಜಿಲ್ಲೆಯಾದ್ಯಂತ ಭತ್ತದ ಬೆಳೆ ಕಟಾವಿಗೆ ಆರಂಭವಾಗಿದ್ದು ಭತ್ತದ ಕಟಾವು ಯಂತ್ರದ ಮಾಲೀಕರು ಹಾಗೂ ದಲ್ಲಾಳಿಗಳು ಪ್ರತಿ ಘಂಟೆಗೆ ರೂ.2400/- ಕ್ಕೂ ಮಿಕ್ಕಿ ವಸೂಲಿ ಮಾಡಿ ರೈತರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆರೋಪಿಸಿದೆ.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಲನ ಸಮಿತಿ ನಿಯೋಗವು ಇಂದು ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ನೀಡಿತು.
ಕಷ್ಟದಲ್ಲಿ ಭತ್ತ ಬೆಳೆದ ರೈತರಿಗೆ ಜಿಲ್ಲೆಗಳಿಗೆ ಬರುವ ಕಟಾವು ಯಂತ್ರಗಳ ವಸೂಲಿಯಿಂದ ಸಂಕಷ್ಟಕ್ಕೀಡಾಗಿದ್ದಾರೆ ಜಿಲ್ಲಾಧಿಕಾರಿಗಳು ನಿಗದಿತ ದರ ವಿಧಿಸಿ ಪ್ರಕಟಣೆ ಹೊರಡಿಸಬೇಕು ಅಲ್ಲದೇ ರೈತರ ಹಾಗೂ ಕಟಾವು ಯಂತ್ರದ ಮಾಲಕರು ಹಾಗೂ ಕ್ರಷಿ ಇಲಾಖೆ ಜೊತೆ ಜಂಟಿ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಲಾಯಿತು.
ಅಕ್ಟೋಬರ್ ತಿಂಗಳಲ್ಲಿ ಖರೀದಿ ಕೇಂದ್ರಕ್ಕೆ ಆಗ್ರಹ
ಬಹುತೇಕ ರೈತರಿಗೆ ಅನುಕೂಲವಾಗುವ ಭತ್ತದ ಖರೀದಿ ಕೇಂದ್ರಗಳನ್ನು ಅಕ್ಟೋಬರ್ ತಿಂಗಳಲ್ಲೇ ಬೆಂಬಲ ಬೆಲೆ ಘೋಷಿಸಿ ಆರಂಭಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ನಿಯೋಗದಲ್ಲಿ ಜಿಲ್ಲಾ ಸಂಚಾಲಕ ಚಂದ್ರಶೇಖರ ವಿ, ರೈತರಾದ ಅನಿಲ್ ಬಾರ್ಕೂರು, ಗಣೇಶ್ ಪೂಜಾರಿ, ಜಲಂಧರ್, ಕಾರ್ಮಿಕ ಮುಖಂಡರಾದ ಸುರೇಶ್ ಕಲ್ಲಾಗರ, ಶಶಿಧರ ಗೊಲ್ಲ ಕ್ರಷಿಕೂಲಿಕಾರ ಮುಖಂಡರಾದ ಕವಿರಾಜ್ ಎಸ್ ಮೋಹನ್ ಇದ್ದರು.