ಉಡುಪಿ: ಅಕ್ಟೋಬರ್ 08: ವಾಹನದಿಂದ ತೈಲ ಸೋರಿಕೆಯಾದ ಕಾರಣ ದ್ವಿಚಕ್ರ ವಾಹನಗಳು ಪಲ್ಟಿ ಹೊಡೆದ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ರಾ.ಹೆ.ಯಲ್ಲಿ ಸೋಮವಾರ (ಅ.07) ಸಂಜೆ ವೇಳೆಗೆ ನಡೆದಿದೆ..
7ರಿಂದ 8ರಷ್ಟು ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದಿದ್ದಾರೆ ಎಂದು ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ ಬಳಿಕ ಮಲ್ಪೆ ಠಾಣೆಯ ಅಗ್ನಿಶಾಮಕ ವಾಹನ ಆಗಮಿಸಿ ನೀರು ಸಿಂಪಡಣೆ ಮಾಡಿ ಸ್ವತ್ಛಗೊಳಿಸಿದರು. ಅಗ್ನಿಶಾಮಕ ದಳದ ಸಿಬಂದಿ ಪದ್ಮನಾಭ ಕಾಂಚನ್, ದಿವಾಕರ್, ಅರುಣ್ ಭಾಗವಹಿಸಿದ್ದರು. ಸಮಾಜ ಸೇವಕ ನಿತ್ಯನಂದ ಒಳಕಾಡು ಸಹಕರಿಸಿದರು. ಟ್ರಾಫಿಕ್ ಪೊಲೀಸರು ಸಂಚಾರ ದಟ್ಟನೆ ನಿಯಂತ್ರಿಸಿದರು
ಯಾವ ವಾಹನದಿಂದ ತೈಲ ಸೋರಿಕೆಯಾಗಿದೆ ಹಾಗೂ ಆ ವಾಹನ ಎಲ್ಲಿಗೆ ಸಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಶಿರಿಬೀಡು ಜಂಕ್ಷನ್ ಬಳಿಯಿಂದ ಕಲ್ಸಂಕದವರೆಗೆ ತೈಲ ಅಪಾರ ಪ್ರಮಾಣದಲ್ಲಿ ಸೋರಿಕೆಯಾಗಿರುವುದು ಕಂಡುಬಂದಿತ್ತು. ಅನಂತರ ಯಾವುದೇ ಸೋರಿಕೆ ಅಂಶಗಳು ರಸ್ತೆಯಲ್ಲಿ ಇರಲಿಲ್ಲ. ಈ ಬಗ್ಗೆ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ವಾಹನವನ್ನು ಪತ್ತೆ ಹಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಹಿಂದೆಯೂ ನಗರದಲ್ಲಿ ಇದೇ ರೀತಿ ತೈಲ ಸೋರಿಕೆಯಾಗಿ ಹಲವಾರು ಮಂದಿ ದ್ವಿಚಕ್ರ ವಾಹನ ಸವಾರರು ಪಲ್ಟಿಯಾಗಿ ಬಿದ್ದ ಘಟನೆ ನಡೆದಿತ್ತು.