ಕುಂದಾಪುರ :ಸೆಪ್ಟೆಂಬರ್ 30: ಕುಂದಾಪುರದ ಹಂಗಳೂರಿನಲ್ಲಿನ ಸರ್ವಿಸ್ ರಸ್ತೆಯಲ್ಲಿ ಬೈಕ್ ಮತ್ತು ಬುಲೆಟ್ ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಇದೀಗ ಬುಲೆಟ್ ಸವಾರ ಕೂಡ ಮೃತಪಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ
ಮೃತ ಬುಲೆಟ್ ಸವಾರ ಹಾಸನ ಮೂಲದ ಪುನೀತ್ ಎಂದು ಗುರುತಿಸಲಾಗಿದೆ ಶನಿವಾರ ರಾತ್ರಿ 11 ಗಂಟೆಯ ಸುಮಾರಿಗೆ ಬೈಕ್ ಮತ್ತು ಬುಲೆಟ್ ಮುಖಾಮುಖಿ ಢಿಕ್ಕಿಯಾಗಿತ್ತು. ಈ ವೇಳೆ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿ ಬುಲೆಟ್ ಸವಾರ ಗಂಭೀರವಾಗಿ ಗಾಯಗೊಂಡಿದ್ದರು.
ಅಪಘಾತದಲ್ಲಿ ಕುಂದಾಪುರ ನಗರದ ಬರೆಕಟ್ಟುವಿನ ಬಾಳೆಹಿತ್ಲು ನಿವಾಸಿಯಾದ ಪೈಂಟರ್ ವೆಂಕಟೇಶ್ ಇವರ ಪುತ್ರ ಶಶಾಂಕ್ ಮೊಗವೀರ(22) ಸ್ಥಳದಲ್ಲೇ ಸಾವನ್ನಪ್ಪಿದ್ದನು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬುಲೆಟ್ ಸವಾರ ಪುನೀತ್ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಪುನೀತ್ ಎಂಬವರು ಅವಿವಾಹಿತರಾಗಿದ್ದು ಕಂಡ್ಲೂರಿನಲ್ಲಿ ಅಯಂಗರ್ ಬೇಕರಿ ನಡೆಸುತ್ತಿದ್ದು, ಕಳೆದ 12 ವರ್ಷಗಳಿಂದ ಕಂಡ್ಲೂರಿನಲ್ಲಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದರು. ಇನ್ನು ಅಪಘಾತದಲ್ಲಿ ಪುನೀತ್ ಇವರ ತಾಯಿ ಗಂಭೀರವಾಗಿ ಗಾಯಗೊಂಡಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.