ಉಡುಪಿ: ಸೆಪ್ಟೆಂಬರ್ 29 :ಶ್ರೀಕೃಷ್ಣಮುಖ್ಯಪ್ರಾಣರ ಸನ್ನಿಧಾನದಲ್ಲಿ ಶರನ್ನವರಾತ್ರಿಯನ್ನು ಅಕ್ಟೋಬರ್ 2 ರಿಂದ 13ರ ವರೆಗೆ ಆಚರಿಸಲಾಗುತ್ತಿದ್ದು, ಈ ಪರ್ವಕಾಲದಲ್ಲಿ ಶ್ರೀಕೃಷ್ಣನಿಗೆ ನವವಿಧ ಸ್ತ್ರೀ ಅಲಂಕಾರಗಳು ಸಮರ್ಪಿತವಾಗಲಿದೆ.
ಅಕ್ಟೋಬರ್ 05ರಂದು ಸಂಜೆ ರಾಜಾಂಗಣದಲ್ಲಿ ಸಂಜೆ 5ರಿಂದ ಸಾಮೂಹಿಕ ಅಷ್ಟಾದಶ ದುರ್ಗಾ ದೀಪನಮಸ್ಕಾರ ಅಕ್ಟೋಬರ್ 11ರಂದು ಚಂಡಿಕಾಯಾಗ ಪೂರ್ಣಾಹುತಿಯು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಪ್ರತಿನಿತ್ಯ ರಾಜಾಂಗಣದಲ್ಲಿ ಹಾಗೂ ಮಧ್ವಮಂಟಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.
ಅಕ್ಟೋಬರ್ 2ರಿಂದ 13ರ ವರೆಗೆ ವಿದ್ವಾನ್ ಸತ್ಯಮೂರ್ತಿ ಆಚಾರ್ಯ ಹುಬ್ಬಳ್ಳಿ ಇವರಿಂದ ‘ಶ್ರೀನಿವಾಸಕಲ್ಯಾಣ ನೀಡಿದ ಗೀತಾಚಿಂತನೆ’ ಎಂಬ ವಿಚಾರದ ಕುರಿತಾಗಿ ಸಂಜೆ 6ಕ್ಕೆ ಉಪನ್ಯಾಸ ನಡೆಯಲಿದೆ. ಅಕ್ಟೋಬರ್ 13ರಂದು ವಿಜಯದಶಮಿಯ ಪರ್ವಕಾಲದಲ್ಲಿ ಮಧ್ವಜಯಂತಿ ಆಚರಣೆಯು ನಡೆಯಲಿದ್ದು, ಅನಂತೇಶ್ವರ ದೇವಳದ ಆಚಾರ್ಯ ಮಧ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಪಾರಾಯಣಗಳು ನಡೆಯಲಿವೆ. ಶ್ರೀಕೃಷ್ಣಮಠದಲ್ಲಿ ಸಂಪ್ರದಾಯದಂತೆ ಕದಿರುಕಟ್ಟುವ ಕಾರ್ಯಕ್ರಮವಿದೆ.
ಸಂಜೆ ಮಧ್ವಾಚಾರ್ಯರ ಗ್ರಂಥಗಳ ಭಾವಚಿತ್ರದ ಮೆರವಣಿಗೆ ಹಾಗೂ ಶ್ರೀಕೃಷ್ಣಮಠದಿಂದ ಶಮೀಪೂಜೆಯ ಪ್ರಯುಕ್ತ ಕಡಿಯಾಳಿ ಮಹಿಷಮರ್ದಿನಿಯ ಸನ್ನಿಧಾನಕ್ಕೆ ವಿಜಯೋತ್ಸವ ನಡೆಯಲಿದ್ದು ಎಲ್ಲ ಭಕ್ತರೂ ನವರಾತ್ರಿಯ ಸಂದರ್ಭದ ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ.