ಗಂಗೊಳ್ಳಿ: ಸೆಪ್ಟೆಂಬರ್ 26: ಸ್ಥಳೀಯ ಜಾಮಿಯಾ ಮೊಹಲ್ಲಾ ಪೊಲೀಸ್ ಚೆಕ್‌ಪೋಸ್ಟ್ ಎದುರಿನ ನಿವಾಸಿ ಬಶೀರ್ ಅಹ್ಮದ್ ಅವರ ಪುತ್ರ ಮುಬಾಶೀರ್ ಬಶೀರ್ (30) ಅವರು ಸೌದಿ ಅರೇಬಿಯಾದಲ್ಲಿ ಹಠಾತ್ತನೆ ಕುಸಿದು ಬಿದ್ದು, ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಸೆ. 25ರಂದು ಮಧ್ಯಾಹ್ನ ಸಂಭವಿಸಿದೆ.
ಮುಬಾಶೀರ್ ಅವರು ಸೌದಿ ಅರೇಬಿಯಾದಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. 2 ವರ್ಷದ ಹಿಂದೆ ಮಹಾರಾಷ್ಟ್ರದ ಪುಣೆಯ ಯುವತಿಯೊಂದಿಗೆ ವಿವಾಹವಾಗಿದ್ದು, ಬಳಿಕ ಪತ್ನಿಯೊಂದಿಗೆ ಸೌದಿಯಲ್ಲಿಯೇ ನೆಲೆಸಿದ್ದರು. ಮೃತರು ಪತ್ನಿ, ತಾಯಿ, ತಂದೆ ಹಾಗೂ ಸಹೋದರನನ್ನು ಅಗಲಿದ್ದಾರೆ.
ಅವರು ಕುಂದಾಪುರದ ಎಚ್‌ಎಂಎಂ ಶಾಲೆ, ವಿಕೆಆರ್ ಶಾಲೆ, ಭಂಡಾರ್‌ಕಾರ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿ ಅನಂತರ ಭಟ್ಕಳದ ಅಂಜುಮಾನ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿ ಸೌದಿಗೆ ತೆರಳಿದ್ದರು.
ಅಂತ್ಯಕ್ರಿಯೆ ವಿಧಿವಿಧಾನಗಳ ಬಗ್ಗೆ ಸೌದಿ ದೇಶದ ಕಾನೂನು ಪ್ರಕ್ರಿಯೆಗಳು ಮುಗಿದ ಅನಂತರವೇ ತಿಳಿದು ಬರಬೇಕಿದೆ.