ಬೆಂಗಳೂರು : ಸೆಪ್ಟೆಂಬರ್ 23:ರಸ್ತೆ ಅಪಾಘಾತಕ್ಕೀಡಾದವರಿಗೆ ಗೋಲ್ಡನ್ Hour ಒಳಗಾಗಿ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ 65 ನೂತನ ಅಂಬ್ಯುಲೆನ್ಸ್ ಗಳ ಸೇವೆಗೆ ಇಂದು ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಸಾರಿಗೆ ಇಲಾಖೆ ಸಹಕಾರದೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ರೋಡ್ ಸುರಕ್ಷತೆ ನಿಧಿಯಡಿ ಯೋಜನೆ ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದು, ಮೊದಲ ಹಂತದಲ್ಲಿ 65 ಅಂಬ್ಯುಲೆನ್ಸ್ ಗಳನ್ನ ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಿಕೊಟ್ಟಿದ್ದಾರೆ.
ಅಪಘಾತಕ್ಕೀಡಾದವರಿಗೆ ಆಪತ್ಬಾಂಧವನ ರೀತಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ಅಂಬ್ಯುಲೆನ್ಸ್ ಗಳಲ್ಲಿ 26 ಅಡ್ವಾನ್ಸ್ ಲೈಫ್ ಸಪೋರ್ಟ್ ತಂತ್ರಜ್ಞಾನವನ್ನ ಅಳವಡಿಸಲಾಗಿದೆ. 39 BLS ಅಂಬ್ಯುಲೆನ್ಸ್ ಗಳಿವೆ. ರಸ್ತೆ ಸಂಚಾರದಲ್ಲಿ ಹೆಚ್ಚು ಅಪಘಾತ ಸಂಭವಿಸುವ 65 ಬ್ಲಾಕ್ ಸ್ಪಾಟ್ ಗಳನ್ನ ಗುರುತಿಸಿದ್ದು, ಅಂಥಹ ಸ್ಥಳಗಳ ಹತ್ತಿರದಲ್ಲಿರುವ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಈ ಅಂಬ್ಯುಲೆನ್ಸ್ ಗಳನ್ನ ನೀಡಲಾಗಿದೆ.
ಅಂಬ್ಯುಲೆನ್ಸ್ ಗಳು ಹೇಗೆ ಕಾರ್ಯನಿರ್ವಹಿಸಲಿವೆ.?
* ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳ ಸನಿಹದ ಆಸ್ಪತ್ರೆಗಳಲ್ಲಿ ತಂಗಲಿವೆ.
* 65 ಹಾಟ್ ಸ್ಪಾಟ್ ಗಳನ್ನ ಗುರುತಿಸಲಾಗಿದ್ದು, ಆ ಸ್ಥಳಗಳ ಹತ್ತಿರದ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳಿಗೆ ಅಂಬ್ಯುಲೆನ್ಸ್ ಗಳನ್ನ ನೀಡಲಾಗಿದೆ.
* ತುರ್ತು ಪರಿಸ್ಥಿತಿ ಸಂದರ್ಭದಲ್ಲಿ (ALS) ಅಡ್ವಾನ್ಸ್ ಲೈಫ್ ಸಪೋರ್ಟ್ ಅಂಬ್ಯುಲೆನ್ಸ್ ಸೇವೆ ಲಭ್ಯವಾಗಲಿದೆ.
* ಜಿಲ್ಲಾಸ್ಪತ್ರೆಗಳ ಮಟ್ಟದಲ್ಲಿ ಚಿಕಿತ್ಸೆ ಅಗತ್ಯವಾದಲ್ಲಿ ಆರೋಗ್ಯ ಇಲಾಖೆಯ ಸ್ಟಾಫ್ ನರ್ಸ್ ಅನ್ನ ಅಂಬ್ಯುಲೆನ್ಸ್ ಗಳಿಗೆ ಡೆಪ್ಯೂಟ್ ಮಾಡಲಾಗುವುದು.
* ವೆಂಟೀಲೇಟರ್ ಸಹಾಯದೊಂದಿಗೆ ಜಿಲ್ಲಾಸ್ಪತ್ರೆಗಳಿಗೆ ರೋಗಿಗಳನ್ನ ಕರೆದೊಯ್ದು ಚಿಕಿತ್ಸೆ ಕೊಡಿಸುವ ಸೌಲಭ್ಯ ಒದಗಿಸಲಾಗಿದೆ..
* ಅಂಬ್ಯುಲೆನ್ಸ್ ಗಳು ಸುಸಜ್ಜಿತ ಉಪಕರಣಗಳು ಮತ್ತು ಔಷಧಿ ಹಾಗೂ ಉಪಭೋಗ್ಯ ವಸ್ತುಗಳನ್ನು ಹೊಂದಿರಲಿವೆ. ಈ ಪ್ರಕ್ರಿಯೆಯು ಅಪಘಾತಕ್ಕೆ ಒಳಗಾದ ವ್ಯಕ್ತಿಯ ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಅಲ್ಲದೇ ಸ್ಥಳಾಂತರಕ್ಕೆ ರೋಗಿಗಳ ಸ್ವಂತ ಹಣದ ವ್ಯಯವನ್ನು ತಪ್ಪಿಸಲಿದೆ.
ಅಂಬ್ಯುಲೆನ್ಸ್ ಗಳಿಗೆ ಸಿಎಂ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ರಾಜ್ಯದಲ್ಲಿ ಪ್ರತಿ ವರ್ಷ 40 ಸಾವಿರ ಅಪಘಾತ ಪ್ರಕರಣಗಳು ನಡೆಯುತ್ತಿವೆ. ಸರಾಸರಿ 10 ಸಾವಿರ ಜನರು ಸಾವನ್ನಪುತ್ತಿದ್ದಾರೆ. ಹೀಗಾಗಿ ಅಪಘಾತಕ್ಕೆ ಒಳಗಾಗುವ ಜನರ ರಕ್ಷಣೆಗೆ ಪ್ರತ್ಯೇಕವಾಗಿ ಮುಖ್ಯಮಂತ್ರಗಳ ಹೆಸರಿನಲ್ಲೇ “ಆಪತ್ಕಾಲಯಾನ” ಅಂಬ್ಯುಲೆನ್ಸ್ ಗಳ ಸೇವೆಯನ್ನ ಒದಗಿಸುತ್ತಿದ್ದೇವೆ ಎಂದರು. ಮುಂಬರುವ ವರ್ಷದಲ್ಲಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗು ಈ ಯೋಜನೆ ವಿಸ್ತರಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಕುಡಿದು ವಾಹನ ಚಲಾಯಿಸುವವರ ಲೈಸೆನ್ಸ್ ರದ್ದು ಪಡಿಸಲು ಸಿಎಂ ಸೂಚನೆ
ಕಾರ್ಯಕ್ರದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಮ್ಮ ಸರ್ಕಾರ ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಅಪಘಾತಗಳ ಪ್ರಕರಣಗಳಲ್ಲಿ ಸಾವುಗಳನ್ನ ತಡೆಯುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನ ಹಾಕಿಕೊಳ್ಳುತ್ತಿದೆ. ಆರೋಗ್ಯ ಇಲಾಖೆಯಿಂದ ಇಂದು 65 ಅಂಬ್ಯುಲೆನ್ಸ್ ಗಳನ್ನ ಜನಸೇವೆಗಾಗಿ ಮುಡಿಪಾಗಿಟ್ಟಿದ್ದೇವೆ. ರಾಜ್ಯದಾದ್ಯಂತ ಈ ಯೋಜನೆ ವಿಸ್ತರಿಸಲು ಬೇಕಾಗುವ ಹಣಕಾಸನ್ನ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ ಸರ್ಕಾರದ ಜೊತೆ ಸಾರ್ವಜನಿಕರು ಸಹಕರಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನ ಜನರು ಪಾಲಿಸಬೇಕು. ವೇಗವಾಗಿ ಚಲಿಸಿದರೆ ಅಪಘಾತ ಆಗಲಿದೆ ಎನ್ನುವುದು ಗೊತ್ತಿದ್ದರು ಕೆಲವರು ವೇಗವಾಗಿ ವಾಹನ ಚಲಾಯಿಸುತ್ತಾರೆ. ಇವನ್ನೆಲ್ಲ ಬಿಡಿ ಎಂದು ನಾಡಿನ ಜನರಿಗೆ ಕಿವಿಮಾತು ಹೇಳಿದರು. ಅಲ್ಲದೇ ಕುಡಿದು ವಾಹನ ಚಲಾಯಿಸುವವರು, ಅತಿ ವೇಗವಾಗಿ ಡ್ರೈವಿಂಗ್ ಮಾಡುವವರ ಲೈಸೆನ್ಸ್ ಕ್ಯಾನ್ಸಲ್ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಇದೇ ವೇಳೆ ಸಾರಿಗೆ ಸಚಿವರಿಗೆ ಸಿಎಂ ಸೂಚನೆ ನೀಡಿದರು.