ಉಡುಪಿ: ಸೆಪ್ಟೆಂಬರ್ 20:ಅಂಗನವಾಡಿ ಕಾರ್ಯಕರ್ತೆಯರನ್ನು ಖಾಯಂಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಡುಪಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೆಪ್ಟೆಂಬರ್ 19ರಂದು ಧರಣಿ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸರಕಾರದ ವಿರುದ್ಧ ದಿಕ್ಕಾರ ಕೂಗಿದರು. ಅಂಗನವಾಡಿ ನೌಕರರನ್ನು ಸರಕಾರವು ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸದೆ ಕೇವಲ ದುಡುಮೆಗಾಗಿ ಬಳಸಿಕೊಂಡು ಶೋಷಣೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
6ನೇ ಗ್ಯಾರಂಟಿ ಯೋಜನೆಯಡಿ ಕಾರ್ಯಕರ್ತೆಯರಿಗೆ 15 ಸಾವಿರ, ಸಹಾಯಕಿಯರಿಗೆ 10 ಸಾವಿರ ಗೌರವಧನ ಹೆಚ್ಚಿಸಬೇಕು. ನಿವೃತ್ತಿಯಾದವರಿಗೆ 3 ಲಕ್ಷ ಇಡುಗಂಟು ಜಾರಿಗೊಳಿಸಬೇಕು. 2023ರ ಏಪ್ರಿಲ್ 1ರಿಂದ ನಿವೃತ್ತಿಯಾದವರಿಗೆ ಗಾಜ್ಯುಟಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು 5ನೇ ತಾರೀಕಿನೊಳಗೆ ಗೌರವ ಧನ ನೀಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.