ಕಿನ್ನಿಗೋಳಿ:ಸೆಪ್ಟೆಂಬರ್ 09: ರಸ್ತೆ ದಾಟುತ್ತಿದ್ದ ಮಹಿಳೆ ರಿಕ್ಷಾ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ಕಿನ್ನಿಗೋಳಿ ರಾಮನಗರದಲ್ಲಿ ಸಂಭವಿಸಿದೆ.
ಪಿಗ್ಮಿ ಕಲೆಕ್ಷನ್ ಮಾಡುತ್ತಿದ್ದ ರಾಜರತ್ನಪುರ ನಿವಾಸಿ ಚೇತನಾ (35) ಗಾಯಗೊಂಡವರು. ಇವರ ಪುತ್ರಿ 7ನೇ ತರಗತಿ ವಿದ್ಯಾರ್ಥಿನಿ ವೈಭವಿ ಸಮೀಪದ ಟ್ಯೂಷನ್ ಸೆಂಟರ್‌ಗೆ ಹೋಗುತ್ತಿದ್ದಳು. ಅಲ್ಲಿಂದ ಆಕೆಯನ್ನು ಕರೆತರಲು ಹೋಗುತ್ತಿದ್ದ ಮಹಿಳೆ ರಸ್ತೆ ದಾಟುತ್ತಿದ್ದಾಗ ಕಟೀಲಿನಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ರಿಕ್ಷಾವೊಂದು ಇವರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಎದುರಿನಿಂದ ಬರುತ್ತಿದ್ದ ಪುತ್ರಿಯ ಎದುರಿನಲ್ಲೇ ಅಪಘಾತ ಸಂಭವಿಸಿದೆ.
ಮಹಿಳೆ ರಿಕ್ಷಾದಡಿಯಲ್ಲಿ ಸಿಲುಕಿದ್ದು, ತತ್‌ಕ್ಷಣವೇ ಓಡಿಬಂದ ಆಕೆಯ ಪುತ್ರಿ ಹಾಗೂ ಸ್ಥಳದಲ್ಲಿದ್ದ ಯುವಕರು ರಿಕ್ಷಾವನ್ನು ಎತ್ತಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ಆಟೋ ಚಾಲಕ, ಪ್ರಯಾಣಿಕ ಸಹಿತ ಸ್ಥಳದಲ್ಲಿದ್ದ ಕೆಲವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ದೃಶ್ಯ ಸಿಸಿ ಟಿವಿ ಕೆಮರಾದಲ್ಲಿ ಸೆರೆಯಾಗಿದೆ.