ಕುಂದಾಪುರ :ಸೆಪ್ಟೆಂಬರ್ 04: ಮರವಂತೆ ಗ್ರಾಮದಲ್ಲಿ ಅಂಚೆ ಕಚೇರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ಮಂಗಳವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಹಿಂದೆ ಮರವಂತೆ ಅಂಚೆ ಕಚೇರಿಯಲ್ಲಿ ನಡೆದ ಕಳ್ಳತನ ಪ್ರಯತ್ನಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದ ಗಂಗೊಳ್ಳಿ ಪೊಲೀಸರು, ಪರಿಸರದ ಸಿ.ಸಿ.ಟಿ.ವಿ. ಕ್ಯಾಮೆರಾದ ದೃಶ್ಯದ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಮುಂದಾಗಿದ್ದರು.
ಗಂಗೊಳ್ಳಿ ಪೊಲೀಸ್ ಠಾಣಾ ಪಿಎಸ್‌ಐಗಳಾದ ಹರೀಶ್.ಆರ್ ಮತ್ತು ಬಸವರಾಜ ಕನಶೆಟ್ಟಿ ಹಾಗೂ ಸಿಬ್ಬಂದಿ ಸಂದೀಪ ಕುರಾಣಿ, ರಾಜು ನಾಯ್ಕ, ನಾಗರಾಜ ಹಾಗೂ ದಿನೇಶ್ ಅವರ ತಂಡ ಆರೋಪಿಯ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕು ಭಟ್ಕಳ ಜಾಲಿ ರಸ್ತೆ ಕ್ರಾಸ್ ಎಂಬಲ್ಲಿ ಪೌಜಾನ್ ಅಹಮ್ಮದ್(19 ) ಹಾಗೂ ಇನ್ನೊರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಕೆಎ 30 ಎಲ್ 0097 ನಂಬರ್‌ನ ಟಿ.ವಿ.ಎಸ್ ಮೋಟಾರ್ ಸೈಕಲ್‌ನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.