ಉಡುಪಿ: ಸೆಪ್ಟೆಂಬರ್ 04: ತನ್ನ ಸಹಪಾಠಿ ವೈದ್ಯಕೀಯ ವಿದ್ಯಾರ್ಥಿನಿಗೆ ವೈದ್ಯನೊಬ್ಬ ಕಿರುಕುಳ ನೀಡಿದ್ದು, ಈ ಸಂಬಂಧ ಆಕೆ ನೀಡಿದ ದೂರಿನಂತೆ ಉಡುಪಿಯ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕುಳ ನೀಡಿದ್ದ ವೈದ್ಯಕೀಯ ವಿದ್ಯಾರ್ಥಿ ಮಹಮ್ಮದ್ ಡ್ಯಾನಿಷ್ ಖಾನ್ (27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿ ಮತ್ತು ಆರೋಪಿ ಇಬ್ಬರೂ ಹೊರರಾಜ್ಯದವರಾಗಿದ್ದು, ಆರಂಭದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಯಲ್ಲಿದ್ದಾಗ ಡ್ಯಾನಿಷ್ ಮದುವೆಯ ಪ್ರಸ್ತಾವ ಮುಂದಿಟ್ಟಿದ್ದ ಎನ್ನಲಾಗಿದೆ. ಡ್ಯಾನಿಷ್ ಖಾನ್ ಮತ್ತು ಸಂತ್ರಸ್ತೆ ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಕ್ಯಾಂಪಸ್‌ನಲ್ಲಿ ಪರಿಚಯವಾಗಿದ್ದರು. ಅನಂತರ 2024ರ ಜ. 22ರಂದು ಮಾತುಕತೆ ವೇಳೆ ಹಿಂದೂ ಧರ್ಮ ಹಾಗೂ ರಾಮ ಮಂದಿರದ ಬಗ್ಗೆ ಅವಹೇಳನಕಾರಿಯಾಗಿ ಡ್ಯಾನಿಶ್ ಮಾತನಾಡಿರುವುದಾಗಿ ಆರೋಪಿಸಲಾಗಿದೆ.
ಘಟನೆಯ ವಿವರ
ಮಾ.11ರಂದು ಆತ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದ. ಅನಂತರ ಎ. 17ರಂದು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದಾಗ ಡ್ಯಾನಿಶ್ ತನ್ನ ಕೆನ್ನೆಗೆ ಹೊಡೆದು, ಕೂದಲು ಹಿಡಿದು ಎಳೆದು ಲೈಂಗಿಕತೆಗೆ ಬೇಡಿಕೆ ಇಟ್ಟಿದ್ದ. 2024ರ ಆ. 28ರ ವರೆಗೂ ಫೋನ್‌ನಲ್ಲಿ ತನ್ನನ್ನು ಸಂಪರ್ಕಿಸಿ ನಿರಂತರ ಕಿರುಕುಳ ನೀಡುತ್ತಿದ್ದ ಎಂದು ವೈದ್ಯಕೀಯ ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.