ಕಾರ್ಕಳ :ಸೆಪ್ಟೆಂಬರ್ 04:ಸಾಣೂರಿನ ಮುರತ್ತಂಗಡಿಯ ಕ್ಯಾಶ್ಯೂ ಫ್ಯಾಕ್ಟರಿ ಬಳಿ ಪ್ರಚೋದನಕಾರಿ ಫ್ಲೆಕ್ಸ್ ಅಳವಡಿಸಿರುವ ಘಟನೆ ಸೆ. 3ರಂದು ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸಹಿತ ಇಬ್ಬರನ್ನು ಬಂಧಿಸಲಾಗಿದೆ.
ಸಾಣೂರು ಗ್ರಾ.ಪಂ. ಪಿಡಿಒ ಮಧು ಎಂ.ಸಿ. ನೀಡಿದ ದೂರಿನಂತೆ ಅವಹೇಳನಕಾರಿಯಾಗಿ ಅನ್ಯ ಧರ್ಮದ ಬಗ್ಗೆ ಸಾಣೂರು ಮುರತ್ತಂಗಡಿಯಲ್ಲಿ ಫ್ಲೆಕ್ಸ್ ಹಾಕಿದ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿ ಸತೀಶ್ ದೇವಾಡಿಗ ಹಾಗೂ ಫ್ಲೆಕ್ಸ್ ಮಾಡಿಕೊಟ್ಟಿದ್ದ ಕಾರ್ಕಳ ಮಾರ್ಕೆಟ್ ರಸ್ತೆಯಲ್ಲಿರುವ ಗ್ರಾಫಿಕ್ಸ್‌ನ ಮಾಲಕಿ ಪುಷ್ಪಲತಾ ಅವರನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿ ಸತೀಶ್ ದೇವಾಡಿಗನಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ್ದು, ಮಹಿಳಾ ಆರೋಪಿ ಪುಷ್ಪಲತಾಗೆ ಷರತ್ತು ಬದ್ಧ ಜಾಮೀನು ನೀಡಿದೆ.