ಉಡುಪಿ, ಸೆಪ್ಟೆಂಬರ್ 04: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಹಿರಿಯ ನಾಗರಿಕರ ಸಂಸ್ಥೆಗಳು, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, ವೃದ್ಧಾಶ್ರಮಗಳು ಉಡುಪಿ ಹಾಗೂ ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಫರ್ಧೆಗಳುಇಂದು ಸೆಪ್ಟಂಬರ್ 4ರಂದು ಬೆಳಗ್ಗೆ 9 ಗಂಟೆಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ ಪುರುಷೋತ್ತಮ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ್ ಶೆಟ್ಟಿ ಭಾಗವಹಿಸಲಿದ್ದಾರೆ.
ಹಿರಿಯ ನಾಗರಿಕರ ಕ್ರೀಡಾ ಸ್ಪರ್ಧೆಗಳ ವಿವರ: 60ರಿಂದ 70 ವರ್ಷ ವಯೋಮಿತಿಯ ಪುರುಷ ಮತ್ತು ಮಳೆಯರಿಗೆ ಮ್ಯೂಸಿಕಲ್ ಚೇರ್ ಸ್ಪರ್ಧೆ, 60ರಿಂದ 69 ವರ್ಷ ಮತ್ತು 70 ವರ್ಷ ಹಾಗೂ ಮೇಲ್ಪಟ್ಟ ವಯೋಮಿತಿಯ ಪುರುಷರು ಮತ್ತು ಮಹಿಳೆಯರಿಗೆ ಬಿರುಸಿನ ನಡಿಗೆ ಸ್ಪರ್ಧೆ ಹಾಗೂ ಬಕೆಟ್‌ನಲ್ಲಿ ಬಾಲ್ ಎಸೆಯುವ ಸ್ಪರ್ಧೆಗಳು ನಡೆಯಲಿವೆ.
ಹಿರಿಯ ನಾಗರಿಕರ ಸಾಂಸ್ಕೃತಿಕ ಸ್ಪರ್ಧೆಗಳ ವಿವರ: 60ರಿಂದ 69 ವರ್ಷ ಮತ್ತು 70 ವರ್ಷ ಹಾಗೂ ಮೇಲ್ಪಟ್ಟ ವಯೋಮಿತಿಯ ಪುರುಷರು ಮತ್ತು ಮಹಿಳೆಯರಿಗೆ ಗಾಯನ ಸ್ಪರ್ಧೆ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳು ನಡೆಯಲಿವೆ.
ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಹಿರಿಯ ನಾಗರಿಕರು ತಮ್ಮ ವಯಸ್ಸಿನ ದಾಖಲೆಯನ್ನು ಕಡ್ಡಾಯವಾಗಿ ಹಾಜರು ಪಡಿಸಬೇಕು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.