ಕಾಪು: ಸೆಪ್ಟೆಂಬರ್ 01: ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದಲ್ಲಿ 2025ರ ಮಾರ್ಚ್ನಲ್ಲಿ ಜರಗಲಿರುವ ಜೀರ್ಣೋದ್ಧಾರ, ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ನವದುರ್ಗಾ ಲೇಖನ ಯಜ್ಞ ಮತ್ತು ನವಚಂಡಿ ಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಹೇಳಿದರು.
ದೇವಸ್ಥಾನದ ಪ್ರಧಾನ ತಂತ್ರಿ ಕೆ. ಪಿ. ಕುಮಾರಗುರು ತಂತ್ರಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಅವರ ಉಪಸ್ಥಿತಿಯಲ್ಲಿ ಸೆ.3 ರಂದು ಬೆಳಿಗ್ಗೆ ಮಂಗಳ ಗೌರಿ ಪೂಜೆಯೊಂದಿಗೆ ನವದುರ್ಗಾ ಲೇಖನ ಯಜ್ಞ ಪೂರ್ವಭಾವಿ ಲೇಖನ ಸಂಕಲ್ಪಕ್ಕೆ ಚಾಲನೆ ನಿಡಲಾಗುವುದು. ಬೆಳಿಗ್ಗೆ 8.30ಕ್ಕೆ ಅಮ್ಮನ ಸನ್ನಿಧಾನದಲ್ಲಿ ಪ್ರಾರ್ಥನೆ, 8.40ಕ್ಕೆ ಲೇಖನ ಸಂಕಲ್ಪಕ್ಕೆ ಭಕ್ತಾದಿಗಳನ್ನು ಮಂಗಳಗೌರಿ ಮಂಟಪಕ್ಕೆ ಕರೆದೊಯ್ಯುವುದು. 9.09ಕ್ಕೆ ಮಂಗಳಗೌರಿ ಪೂಜೆ ಮತ್ತು ಲೇಖನ ಸಂಕಲ್ಪ ಆರಂಭವಾಗಲಿದೆ
ಬೆಳಿಗ್ಗೆ 10.15ಕ್ಕೆ ಅವಧೂತ ವಿನಯ್ ಗುರೂಜಿ ಗೌರಿಗದ್ದೆ, ಸಂಸದರು, ಉಡುಪಿ ಜಿಲ್ಲೆಯ ಎಲ್ಲ ಶಾಸಕರುಗಳು, ಆಂಧ್ರಪ್ರದೇಶ ಕಲ್ಯಾಣಗುರ್ಗ ಶಾಸಕ ಅಮಿಲಿನೆನಿ ಸುರೇಂದ್ರ ಬಾಬು ಸಹಿತ ಗಣ್ಯರ ಉಪಸ್ಥಿತಿಯಲ್ಲಿ ನವದುರ್ಗಾ ಲೇಖನ ಯಜ್ಞ ಸಮಿತಿ ಉದ್ಘಾಟನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಬಳಿಕ ಮಹಾ ಅನ್ನಸಂತರ್ಪಣೆ ನೆರವೇರಲಿದೆ