ಮಣಿಪಾಲ, 28 ಆಗಸ್ಟ್ 2024: ಸ್ಥಳೀಯ ಕಾನೂನು ಸುವ್ಯವಸ್ಥೆಯನ್ನು ಬೆಂಬಲಿಸಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವ ನಿರಂತರ ಪ್ರಯತ್ನದಲ್ಲಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನಿಂದ (MAHE) ಉಡುಪಿ ಟೌನ್ ಪೊಲೀಸ್ ಠಾಣೆಗೆ 3 ಹೈಟೆಕ್ ಕಂಪ್ಯೂಟರ್ ಸಿಸ್ಟಮ್‌ಗಳನ್ನು ಕೊಡುಗೆಯಾಗಿ ನೀಡಿದೆ. ಈ ದೇಣಿಗೆಯು ಸ್ಥಳೀಯ ಸಮುದಾಯದ ಒಳಿತಿಗಾಗಿ ತನ್ನ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮತ್ತು ಆಧುನಿಕ ಸವಾಲುಗಳನ್ನು ನಿಭಾಯಿಸುವಲ್ಲಿ ಕಾನೂನು ಜಾರಿ ಸಾಮರ್ಥ್ಯಗಳನ್ನು ಬಲಪಡಿಸುವ ಮಾಹೆ ಮಣಿಪಾಲದ ಯ ಬದ್ಧತೆಯನ್ನು ಒತ್ತಿಹೇಳುತ್ತದೆ.
ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅವರು ಈ ಉಪಕ್ರಮದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು, “ನಮ್ಮ ಸ್ಥಳೀಯ ಕಾನೂನು ಸುವ್ಯವಸ್ಥೆಯ ಜಾರಿಯನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬೆಂಬಲಿಸಲು ನಾವು ಸಮರ್ಪಿತರಾಗಿದ್ದೇವೆ. ಈ ಸುಧಾರಿತ ಕಂಪ್ಯೂಟರ್ ವ್ಯವಸ್ಥೆಯನ್ನು ಒದಗಿಸುವ ಮೂಲಕ, ನಾವು ಉಡುಪಿ ಟೌನ್ ಪೊಲೀಸ್ ಠಾಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಆಶಿಸುತ್ತೇವೆ. ತಮ್ಮ ಜವಾಬ್ದಾರಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಿ, ವಿಶೇಷವಾಗಿ ಡೇಟಾ ನಿರ್ವಹಣೆ ಮತ್ತು ಸೈಬರ್-ಸಂಬಂಧಿತ ಕಾರ್ಯಗಳಲ್ಲಿ ಇದು ಸುರಕ್ಷಿತ ಮತ್ತು ಅಗತ್ಯ ದಾಖಲೆ ನಿರ್ವಹಣೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ” ಎಂದರು.
ಮಾಹೆ ಮಣಿಪಾಲದ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಕುಲಪತಿ ಡಾ. ನಾರಾಯಣ ಸಭಾಹಿತ್, ಅವರು ಮಾತನಾಡಿ “ಆಧುನಿಕ ಪೋಲೀಸ್ ದಿನನಿತ್ಯದ ಚಟುವಟಿಕೆಗಳಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಂ ಐ ಟಿ ಮಣಿಪಾಲದಲ್ಲಿ ಸೈಬರ್ ಸುರಕ್ಷತೆಯ ಕುರಿತು ಸುಧಾರಿತ ಲ್ಯಾಬ್‌ನೊಂದಿಗೆ, ಮಾಹೆಯು ಸೈಬರ್ ಸುರಕ್ಷತೆಯಲ್ಲಿ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲು ಸುಸಜ್ಜಿತವಾಗಿದೆ. ಈ ವ್ಯವಸ್ಥೆಗಳ ದೇಣಿಗೆಯ ಜೊತೆಗೆ, ಡಿಜಿಟಲ್ ಯುಗದ ಸವಾಲುಗಳನ್ನು ನಿಭಾಯಿಸಲು ವಿಶೇಷ ತರಬೇತಿಯನ್ನು ನೀಡುವ ಮೂಲಕ ನಾವು ಉಡುಪಿ ಟೌನ್ ಪೊಲೀಸ್ ಠಾಣೆಯನ್ನು ಬೆಂಬಲಿಸಲು ಸಿದ್ಧರಿದ್ದೇವೆ” ಎಂದರು.
ಮಣಿಪಾಲ ಕ್ಯಾಂಪಸ್‌ನಲ್ಲಿ ಭದ್ರತೆಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರವಿರಾಜ ಎನ್.ಎಸ್., “ವಿಶ್ವದ ವಿವಿಧ ಭಾಗಗಳಿಂದ ಸುಮಾರು 28,000 ವಿದ್ಯಾರ್ಥಿಗಳು ನಮ್ಮ ಕ್ಯಾಂಪಸ್‌ನಲ್ಲಿ ಕಲಿಯುತ್ತಿದ್ದು , ಅವರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಇದನ್ನು ಸಾಧ್ಯವಾಗಿಸಲು ಸಹಾಯ ಮಾಡುವ ಪೊಲೀಸ್ ಸಿಬ್ಬಂದಿಯ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ನಾವು ಶ್ಲಾಘಿಸುತ್ತೇವೆ. ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಅವರ ಬದ್ಧತೆ ನಮ್ಮ ಸಮುದಾಯಕ್ಕೆ ಅಮೂಲ್ಯವಾಗಿದೆ ಮತ್ತು ಈ ಕೊಡುಗೆ ನಮ್ಮ ಬೆಂಬಲ ಮತ್ತು ಕೃತಜ್ಞತೆಯ ಸೂಚಕವಾಗಿದೆ” ಎಂದರು .
ಈ ಕೊಡುಗೆಯನ್ನು ಸ್ವೀಕರಿಸಿದ ಉಡುಪಿ ಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶ್ರೀ ಪುನಿತ್ ಕುಮಾರ್ ಅವರು ಕೃತಜ್ಞತೆ ಸಲ್ಲಿಸಿ, “ಈ ಉದಾರ ಕೊಡುಗೆಗಾಗಿ ನಾವು ಮಾಹೆ ಮಣಿಪಾಲಕ್ಕೆ ಕೃತಜ್ಞರಾಗಿರುತ್ತೇವೆ. ಈ ಕಂಪ್ಯೂಟರ್ ವ್ಯವಸ್ಥೆಗಳು ತನಿಖೆಗಳನ್ನು ನಿರ್ವಹಿಸುವಲ್ಲಿ ಮತ್ತು ನಮ್ಮ ದಕ್ಷತೆಯನ್ನು ಸುಧಾರಿಸುವಲ್ಲಿ ನಮ್ಮ ಪ್ರಯತ್ನಗಳಿಗೆ ಹೆಚ್ಚು ಸಹಾಯ ಮಾಡುತ್ತವೆ. ಪ್ರಕರಣಗಳನ್ನು ನಿಭಾಯಿಸಲು ಮಾಹೆಯ ಬೆಂಬಲವು ನಮಗೆ ಉತ್ತಮವಾದ ಸೇವೆಯನ್ನು ನೀಡಲು ಸಹಾಯ ಮಾಡುತ್ತದೆ” ಎಂದರು.
ಮಾಹೆ ಮಣಿಪಾಲದಲ್ಲಿ ನಡೆದ ಔಪಚಾರಿಕ ಸಮಾರಂಭದಲ್ಲಿ ನವೀಕೃತ ಸಾಫ್ಟ್‌ವೇರ್ ಹೊಂದಿದ 3 ಕಂಪ್ಯೂಟರ್ ಸಿಸ್ಟಮ್‌ಗಳನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಹೆ ಮಣಿಪಾಲದ ಸ್ಪೋರ್ಟ್ಸ್ ಕೌನ್ಸಿಲ್‌ನ ಕಾರ್ಯದರ್ಶಿ ಡಾ. ವಿನೋದ್ ಸಿ. ನಾಯಕ್, ಮುಖ್ಯ ಭದ್ರತಾ ಅಧಿಕಾರಿ ಕರ್ನಲ್ ವಿಜಯ್ ಭಾಸ್ಕರ್ ರೆಡ್ಡಿ, ಮಾಹಿತಿ ಮತ್ತು ತಂತ್ರಜ್ಞಾನದ ನಿರ್ದೇಶಕ ಶ್ರೀ ಸಂದೀಪ್ ಬನ್ಸಾಲ್, ಉಪ ನಿರ್ದೇಶಕ ಸತೀಶ್ ಕಾಮತ್ ಉಪಸ್ಥಿತರಿದ್ದರು ಮತ್ತು ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಂವಹನ ವಿಭಾಗದ ಉಪ ನಿರ್ದೇಶಕ ಶ್ರೀ ಸಚಿನ್ ಕಾರಂತ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಇತರ ಅಧಿಕಾರಿಗಳು ಭಾಗವಹಿಸಿದ್ದರು.
ಈ ಕೊಡುಗೆಯು ವಿವಿಧ ಸಾಮಾಜಿಕ ಸವಾಲುಗಳನ್ನು ಎದುರಿಸುವಲ್ಲಿ ಸ್ಥಳೀಯ ಸಮುದಾಯದೊಂದಿಗೆ ತೊಡಗಿಸಿಕೊಳ್ಳಲು ಮತ್ತು ಬೆಂಬಲಿಸಲು ಮಾಹೆ ಮಣಿಪಾಲದ ಪ್ರಯತ್ನಗಳ ಭಾಗವಾಗಿದೆ. ಸುಧಾರಿತ ತಾಂತ್ರಿಕ ಸಂಪನ್ಮೂಲಗಳನ್ನು ಒದಗಿಸುವ ಮೂಲಕ, ಮಾಹೆಯು ಉಡುಪಿ ಟೌನ್ ಪೊಲೀಸ್ ಠಾಣೆಗೆ ಅದರ ಕಾರ್ಯಾಚರಣೆಯಲ್ಲಿ ಸಹಾಯ ಮಾಡುವ ಗುರಿಯೊಂದಿಗೆ ಸಮುದಾಯದ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.