ಉಡುಪಿ:ಆಗಸ್ಟ್ 27:ನವ ವಿಧ ಭಕ್ತಿಗಳಲ್ಲಿ ಭಜನೆಗೆ ವಿಶಿಷ್ಟ ಸ್ಥಾನವಿದೆ. ಮನಸ್ಸಿಗೆ ಶಾಂತಿ, ನೆಮ್ಮದಿ, ಏಕಾಗ್ರತೆಯ ಜೊತೆಗೆ ಸಂಸ್ಕಾರದ ಸ್ಪರ್ಶ ನೀಡುವಲ್ಲಿ ಭಜನೆಯ ಪಾತ್ರ ಮಹತ್ವಪೂರ್ಣ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು, ಹಿರಿಯಡ್ಕ ವಲಯ ಇದರ ನೇತೃತ್ವದಲ್ಲಿ ಮಹಾತೋಭಾರ ಶ್ರೀ ವೀರಭದ್ರ ದೇವಸ್ಥಾನ ಹಿರಿಯಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ತಾಲೂಕು ಮತ್ತು ಎಸ್.ವಿ.ಟಿ ಕರಸೇವಕರು ಹಿರಿಯಡ್ಕ ಇವರ ಜಂಟಿ ಆಶ್ರಯದಲ್ಲಿ ಜು.28ರಿಂದ ಆ.25ರ ವರೆಗೆ ಪ್ರತೀ ರವಿವಾರ ಶ್ರೀ ದೇವಳದ ಸಭಾಂಗಣದಲ್ಲಿ ನಡೆದ ಉಚಿತ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಂತರು, ದಾಸವರೇಣ್ಯರು ನಡೆದಾಡಿದ ಭೂಮಿ ನಮ್ಮದು. ಸುಸಂಸ್ಕೃತ ಹಾಗೂ ಭಾವನಾತ್ಮಕ ಬದುಕನ್ನು ಕಟ್ಟಿಕೊಟ್ಟ ನಾಡು ನಮ್ಮದು. ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಕ್ರಾಂತಿಯ ಮೂಲಕ ಸಂಸ್ಕಾರಯುತ ಬದುಕಿಗೆ ಪುಷ್ಠಿ ನೀಡುವ ಸತ್ಕಾರ್ಯದಲ್ಲಿ ತೊಡಗಿರುವುದು ಪ್ರಶಂಸನೀಯ ಎಂದರು.
ಕುಣಿತ ಭಜನಾ ತರಬೇತುದಾರರಾದ ಪೂರ್ಣಿಮಾ ಪೆರ್ಡೂರು, ಪ್ರಕಾಶ್ ಮಂದಾರ್ತಿ, ನಿತ್ಯಾನಂದ ಕಬ್ಯಾಡಿ ಮತ್ತು ರೋಹಿತ್ ಕಬ್ಯಾಡಿ ಇವರನ್ನು ಸಂಘಟಕರ ಪರವಾಗಿ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸನ್ಮಾನಿಸಿದರು.
ವಿದ್ಯಾರ್ಥಿಗಳು ಮತ್ತು ಭಜನಾಸಕ್ತರಿಗೆ ಉಚಿತ ಕುಣಿತದ ಭಜನಾ ತರಬೇತಿಯ ಅವಕಾಶವನ್ನು ಕಲ್ಪಿಸಿಕೊಟ್ಟ ಭಜನಾ ಪರಿಷತ್ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಅವರನ್ನು ವಲಯದ ಸ್ಥಳೀಯ ಭಜನಾ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.
ಉದ್ಯಮಿ ಹಾಗೂ ಶ್ರೀ ಕ್ಷೇತ್ರ ಹಿರಿಯಡ್ಕದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಟರಾಜ್ ಹೆಗ್ದೆ ಮಾತನಾಡಿ ಕುಣಿತದ ಭಜನೆಯ ಮೂಲಕ ಯುವ ಜನತೆ ಭಜನೆಯ ಕಡೆಗೆ ಆಕರ್ಷಿತರಾಗುತ್ತಿರುವುದು ಉತ್ತಮ ಬೆಳವಣಿಗೆ. ಈ ನಿಟ್ಟಿನಲ್ಲಿ ತಾಲೂಕು ಭಜನಾ ಪರಿಷತ್ತಿನ ಕಾರ್ಯಕ್ರಮಗಳು ಅನುಕರಣೀಯ ಎಂದರು.
ಭಜನಾ ಪರಿಷತ್ ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಪಿ. ಮಾತನಾಡಿ, ಸೆ.22ರಿಂದ ಸೆ.28ರ ವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ ಭಜನಾ ಕಮ್ಮಟದ ಕುರಿತು ವಿಸ್ತ್ರತ ಮಾಹಿತಿ ನೀಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಹಿರಿಯಡ್ಕದ ಖ್ಯಾತ ಪುರೋಹಿತ ಸುಬ್ರಹ್ಮಣ್ಯ ಆಚಾರ್ಯ ಮಾತನಾಡಿ ಭಜನೆ ಭಗವಂತನನ್ನು ಒಲಿಸಿಕೊಳ್ಳುವ ಸುಲಭ ವಿಧಾನ. ಭಜನೆ ಭಕ್ತ ಮತ್ತು ದೇವರ ನಡುವಿನ ಕೊಂಡಿಯಾಗಿದೆ. ಭಗವಂತನಿಗೆ ಅತಿ ಪ್ರಿಯವಾದ ಕುಣಿತದ ಭಜನೆಯ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ತಾಲೂಕು ಭಜನಾ ಪರಿಷತ್ ಸಾಧನೆ ಅಭಿನಂದನೀಯ ಎಂದರು.
ಸಮಾರೋಪದ ಪೂರ್ವದಲ್ಲಿ ಶಿಬಿರಾರ್ಥಿಗಳಿಂದ ನಡೆದ ಕುಣಿತ ಭಜನಾ ಪ್ರಾತ್ಯಕ್ಷಿಕೆಗೆ ಶ್ರೀ ದೇವಳದ ಹಿರಿಯ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ತಂತ್ರಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು, ಕೊಂಡಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಹರೀಶ್ ಭಟ್, ಮಾಣೈ ಮಠ ಶ್ರೀ ಮುಖ್ಯಪ್ರಾಣ ದೇವಸ್ಥಾನದ ಮುಖ್ಯಸ್ಥ ಮಾಧವ ಉಪಾಧ್ಯಾಯ, ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್., ತಾಲೂಕು ಭಜನಾ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪೇತ್ರಿ, ಯೋಜನೆಯ ತರಬೇತಿ ಕೇಂದ್ರದ ಪ್ರಾಂಶುಪಾಲ ಉಲ್ಲಾಸ್ ಮೇಸ್ತ, ಎಸ್.ವಿ.ಟಿ ಕರಸೇವಕರ ಪ್ರಮುಖರಾದ ಶ್ರೀನಿವಾಸ್ ರಾವ್ ಹಿರಿಯಡ್ಕ, ರಮೇಶ್ ದೇವಾಡಿಗ, ಮಹೇಶ್ ಹಿರಿಯಡ್ಕ, ಉದ್ಯಮಿ ಉಮೇಶ್ ಶೆಟ್ಟಿ, ಅಶೋಕ್ ಜೋಗಿ, ವಿಶ್ವ ಹಿಂದೂ ಪರಿಷತ್ತಿನ ದಿನೇಶ್ ಮೆಂಡನ್, ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಹಿರಿಯಡ್ಕ ವಲಯ ಮೇಲ್ವಿಚಾರಕ ಸಂತೋಷ್, ಸೇವಾ ಪ್ರತಿನಿಧಿಗಳು, ಶೌರ್ಯ ವಿಪತ್ತು ಘಟಕದ ಸದಸ್ಯರು, ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಎಸ್.ವಿ. ಟಿ ಕರಸೇವಕರು, ಶಿಬಿರಾರ್ಥಿಗಳು ಮತ್ತು ಭಜನಾಸಕ್ತರು ಉಪಸ್ಥಿತರಿದ್ದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಜನಾ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಮತ್ತು ಕುಣಿತ ಭಜನಾ ತರಬೇತಿಯ ಔಚಿತ್ಯದ ಕುರಿತು ಮಾಹಿತಿ ನೀಡಿದರು.
ತಾಲೂಕು ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು ವಂದಿಸಿದರು. ಉಪನ್ಯಾಸಕಿ ನಳಿನಾ ಎಮ್.ಆರ್. ಕಾರ್ಯಕ್ರಮ ನಿರೂಪಿಸಿದರು.
ಐದು ದಿನಗಳ ಕುಣಿತ ಭಜನಾ ಶಿಬಿರದಲ್ಲಿ ತರಬೇತಿ ಪಡೆದ ಸುಮಾರು 300ಕ್ಕೂ ಮಿಕ್ಕಿ ಶಿಬಿರಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಪ್ರಮಾಣಪತ್ರ ಹಾಗೂ ಶಾಲು ವಿತರಿಸಲಾಯಿತು.
ಸಮಾರೋಪ ಸಮಾರಂಭದ ಬಳಿಕ ಶ್ರೀ ವೀರಭದ್ರ ದೇವಸ್ಥಾನದ ಪ್ರಾಂಗಣದ ಸುತ್ತ ಶಿಬಿರಾರ್ಥಿಗಳಿಂದ ಕುಣಿತದ ಭಜನಾ ಸೇವೆ ಹಾಗೂ ಕ್ಷೇತ್ರದ ಶ್ರೀ ದೇವರಿಗೆ ಎಸ್.ವಿ.ಟಿ. ಕರಸೇವಕರ ವತಿಯಿಂದ ಹೂವಿನ ಪೂಜೆ ಸೇವೆ ನಡೆಯಿತು.